ಬಡ ಮಹಿಳೆಯರು, ಮಕ್ಕಳಿಗಾಗಿ ಆರೋಗ್ಯ ಸೇವಾ ಯೋಜನೆ ಘೋಷಣೆ ಮಾಡಿದ ನೀತಾ ಅಂಬಾನಿ | Nita Ambani

Nita Ambani
Published on

ಮುಂಬೈ: ರಿಲಯನ್ಸ್ ಫೌಂಡೇಶನ್​ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ ( Nita Ambani ) ಅವರು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಬಡ ಕುಟುಂಬದ ಮಕ್ಕಳು ಹಾಗೂ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ "ಆರೋಗ್ಯ ಸೇವಾ ಯೋಜನೆ"ಯನ್ನು ಜಾರಿಗೆ ತಂದಿದ್ದಾರೆ.

ಈ ಮಹತ್ವಾಕಾಂಕ್ಷೆ ಯೋಜನೆಯು ಅಗತ್ಯ ಆರೋಗ್ಯ ತಪಾಸಣೆಯನ್ನು ಒದಗಿಸಲಿದ್ದು, ಮಕ್ಕಳು, ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತ ಚಿಕಿತ್ಸೆಗಳನ್ನು ನೀಡಲಿದೆ.

ಸರ್ ಎಚ್​.ಎನ್​. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಯನ್ನು ನೀತಾ ಅಂಬಾನಿ ಅವರು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಜನ್ಮಜಾತ ಹೃದ್ರೋಗ ಹೊಂದಿರುವ 50,000 ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. 50,000 ಮಹಿಳೆಯರಿಗೆ ಉಚಿತ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಮತ್ತು 10,000 ಹೆಣ್ಣು ಮಕ್ಕಳಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ ನೀಡಲಾಗುವುದು.

ಕಳೆದ ಹತ್ತು ವರ್ಷಗಳಲ್ಲಿ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ ರೀತಿಯಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸಲು ಇದು ಸಾಧ್ಯವಾಗಿಸಿದೆ. ಉತ್ತಮ ಆರೋಗ್ಯವು ಸಮೃದ್ಧ ರಾಷ್ಟ್ರದ ಅಡಿಪಾಯವಾಗಿದೆ. ಆರೋಗ್ಯವಂತ ಮಹಿಳೆಯರು ಮತ್ತು ಮಕ್ಕಳು ಸಮಾಜದ ಶಕ್ತಿ ಎಂದು ನೀತಾ ಅಂಬಾನಿ ಅವರು ಹೇಳಿದರು.

ಅಂದಹಾಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯು ಒಂದು ದಶಕದಲ್ಲಿ ಅಸಾಧಾರಣ ಸೇವೆಗಳನ್ನು ಒದಗಿಸಿದೆ. ಈ ಆಸ್ಪತ್ರೆಯು 1.5 ಮಿಲಿಯನ್ ಮಕ್ಕಳನ್ನು ಒಳಗೊಂಡಂತೆ 2.75 ಮಿಲಿಯನ್ ಭಾರತೀಯರನ್ನು ಮರಳಿ ಬದುಕಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ 500ಕ್ಕೂ ಹೆಚ್ಚು ಅಂಗಾಂಗ ಕಸಿ ಮಾಡಲಾಗಿದೆ. 24 ಗಂಟೆಯೊಳಗೆ ಆರು ಮಂದಿಗೆ ಅಂಗಾಂಗ ಕಸಿ ಮಾಡಿದ ದಾಖಲೆಯನ್ನೂ ಹೊಂದಿದೆ. ಇದು ಸತತವಾಗಿ ಭಾರತದ ನಂಬರ್ ಒನ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net