

Milk : ಹಾಲು ಆರೋಗ್ಯಕರವೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಬಿ 12 ನಂತಹ ಪೋಷಕಾಂಶಗಳು ಹೆಚ್ಚಿವೆ. ಮೂಳೆ, ಸ್ನಾಯು ಬೆಳವಣಿಗೆಯಿಂದ ಹಿಡಿದು ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಈ ಪೋಷಕಾಂಶಗಳು ಅವಶ್ಯಕ. ಹೀಗಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹಾಲು ಕುಡಿಯುವುದು ಸಾಮಾನ್ಯ.
ಹಾಲನ್ನು ಪೌಷ್ಟಿಕಾಂಶದ ಶಕ್ತಿ ಕೇಂದ್ರವೆಂದು ಕರೆಯಲಾಗುತ್ತದೆ. ನಾವು ದಿನವಿಡಿ ವಿವಿಧ ರೂಪಗಳಲ್ಲಿ ಹಾಲನ್ನು ಸೇವಿಸುತ್ತೇವೆ. ಆದರೆ, ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ದೇಹದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತೆ ಗೊತ್ತಾ? ಅದರ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಪೋಸ್ಟ್ನಲ್ಲಿ ನಾವು ತಿಳಿಯೋಣ.
ವೈಜ್ಞಾನಿಕವಾಗಿ ಲ್ಯಾಕ್ಟೇಸ್ ಕಿಣ್ವವು ನಮ್ಮ ದೇಹದ ಸಣ್ಣ ಕರುಳಿನಲ್ಲಿ ಕಂಡುಬರುತ್ತದೆ. ನಾವು ಹಗಲು ಅಥವಾ ರಾತ್ರಿ ಹಾಲು ಕುಡಿದಾಗ, ಈ ಲ್ಯಾಕ್ಟೇಸ್ ಕಿಣ್ವವು ಹಾಲಿನಲ್ಲಿರುವ ಗ್ಯಾಲಕ್ಟೋಸ್ ಮತ್ತು ಗ್ಲೂಕೋಸ್ ಅನ್ನು ಸಣ್ಣ ಅಣುಗಳಾಗಿ ಬೇರ್ಪಡಿಸುತ್ತದೆ. ಪ್ರತಿದಿನ ಬೆಳಗ್ಗೆ ಹಾಲು ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಮೂಳೆಗಳ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುವ ಹಾಲನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ.
ಆದರೆ, ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆ ನೋವು, ಅತಿಸಾರ ಮತ್ತು ಗ್ಯಾಸ್ ಸಮಸ್ಯೆಗಳಂತಹ ಉದರ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆ ಉರಿ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಬರಬಹುದು.
ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯಬೇಕೆಂದು ಅನಿಸಿದರೆ ಬಿಸಿ ಹಾಲಿನ ಬದಲು ತಣ್ಣನೆಯ ಹಾಲನ್ನು ಕುಡಿಯಬಹುದು. ಇದು ಸ್ವಲ್ಪ ಮಟ್ಟಿಗೆ ಆಮ್ಲೀಯತೆಯನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ ಬೆಳಗಿನ ಉಪಾಹಾರದ ನಂತರ ಹಾಲು ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಆಹಾರದ ನಂತರ ಹಾಲು ಕುಡಿಯಿರಿ. ಆದರೆ, ಕಡಿಮೆ ಕೊಬ್ಬಿನ ಅಥವಾ ಕೆನೆರಹಿತ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಥವಾ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿದ್ದರೆ, ನೀವು ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ತುಂಬಾ ಒಳ್ಳೆಯದು. ರಾತ್ರಿ ಹಾಲು ಕುಡಿಯುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಅದರಲ್ಲೂ ಬೆಚ್ಚನೆಯ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳೂ ಪರಿಹಾರ ಸಿಗುತ್ತದೆ.
ಅಧ್ಯಯನಗಳ ಪ್ರಕಾರ, ಬೆಳಗ್ಗೆ ಮತ್ತು ರಾತ್ರಿ ಹಾಲು ಕುಡಿಯುವುದು ಉತ್ತಮ ಆದರೆ, ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹಾನಿಕಾರಕವಾಗಿದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.