ಪಾಕ್​ ಜನರು ಭಾರತೀಯ ಸೇನೆಯನ್ನು ಈ ರೀತಿ ನೋಡ್ತಾರಂತೆ: ಸಾಯಿ ಪಲ್ಲವಿ ಹೇಳಿಕೆ ವೈರಲ್​ | Sai Pallavi

Sai Pallavi
Published on

ಚೆನ್ನೈ: ಸಾಯಿ ಪಲ್ಲವಿ ( Sai Pallavi )… ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿತವನ್ನು ಹೆಚ್ಚಿಸುತ್ತದೆ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತಾದ ಹಳೆಯ ವಿವಾದವೊಂದು ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಕಾಲಿವುಡ್​ ಸ್ಟಾರ್​ ನಟ ಶಿವಕಾರ್ತಿಕೇಯನ್​ ನಟನೆಯ ಅಮರನ್​ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಭಾರತೀಯ ಸೇನೆ ಕುರಿತಾದ ಈ ಸಿನಿಮಾ ಇದೇ ಅ.31ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ನಡುವೆ ಸಾಯಿ ಪಲ್ಲವಿ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋ ಮತ್ತೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Sai Pallavi

ಸಾಯಿ ಪಲ್ಲವಿ 2020ರಲ್ಲಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದರು. ನಕ್ಸಲರ ಬಗ್ಗೆ ಆ್ಯಂಕರ್ ಕೇಳಿದ ಪ್ರಶ್ನೆಗೆ ಸಾಯಿ ಪಲ್ಲವಿ ನೀಡಿದ ಉತ್ತರ ವಿವಾದಕ್ಕೀಡಾಗಿತ್ತು. ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು ಅಂದರೆ, ಭಾರತೀಯ ಸೇನೆಯು ಪಾಕಿಸ್ತಾನಿ ಜನರನ್ನು ಭಯೋತ್ಪಾದಕರಂತೆ ನೋಡುತ್ತದೆ ಮತ್ತು ಪಾಕಿಸ್ತಾನದ ಜನರು ಕೂಡ ಅದೇ ರೀತಿ ನೋಡುತ್ತಾರೆ. ಯಾವುದೇ ರೀತಿಯ ದಾಳಿ ಸರಿಯಲ್ಲ ಎಂದು ಹೇಳಿದ್ದರು.

ನೆಟ್ಟಿಗರೊಬ್ಬರು ಹಳೆಯ ವಿಡಿಯೋ ತುಣುಕನ್ನು ಮತ್ತೆ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಕ್ಷಣ ವೈರಲ್ ಆಗಿದೆ. ಅನೇಕರು ನಟಿಯನ್ನು ಟೀಕಿಸುತ್ತಿದ್ದಾರೆ. ಆದರೆ ಕೆಲವರು ನಟಿಯನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಪಲ್ಲವಿಯವರ ಮಾತುಗಳನ್ನು ತಿರುಚಲಾಗುತ್ತಿದೆ, ಅವರ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಈ ಹಿಂದೆ ಕಾಶ್ಮೀರಿ ಫೈಲ್ಸ್​ ಸಿನಿಮಾ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ಗೋವಿನ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗುರಿಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net