ಡಿವೈಡರ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟೆಸ್ಲಾ ಕಾರು: ಕೆನಡಾದಲ್ಲಿ ಸುಟ್ಟು ಕರಕಲಾದ ನಾಲ್ವರು ಭಾರತೀಯರು | Car accident in Canada

Car accident in Canada
Published on

Car accident in Canada: ಟೆಸ್ಲಾ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಇಬ್ಬರು ಒಡಹುಟ್ಟಿದವರು ಸೇರಿ ನಾಲ್ವರು ಭಾರತೀಯರು ಸುಟ್ಟು ಕರಕಲಾದ ಆಘಾತಕಾರಿ ಘಟನೆ ಕೆನಡಾದ ಟೊರೊಂಟೋ ನಗರದಲ್ಲಿ ಅಕ್ಟೋಬರ್ 24 ರಂದು ಮಧ್ಯರಾತ್ರಿ 12:15 ರ ಸುಮಾರಿಗೆ ಈ ಘಟನೆ ನಡೆದಿದೆ.

ಮೃತ ಒಡಹುಟ್ಟಿದವರನ್ನು ಕೇತಬಾ ಗೋಹಿಲ್​ (30) ಮತ್ತು ನೀಲರಾಜ್ ಗೋಹಿಲ್​ (26) ಎಂದು ಗುರುತಿಸಲಾಗಿದೆ. ಇವರು ಗುಜರಾತಿನ ಗೋಧ್ರಾ ಮೂಲದವರು. ಇವರೊಂದಿಗೆ ಪ್ರಯಾಣಿಸುತ್ತಿದ್ದ ದಿಗ್ವಿಜಯ್ ಪಟೇಲ್ ಮತ್ತು ಜೈ ಸಿಸೋಡಿಯಾ ಕೂಡ ಸಾವಿಗೀಡಾಗಿದ್ದಾರೆ.

ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ನಂತರ ಕಾಂಕ್ರೀಟ್ ಪಿಲ್ಲರ್​ಗೂ ಗುದ್ದಿದೆ. ಇದಾದ ಬಳಿಕ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರು ಧಗಧಗನೇ ಹೊತ್ತಿ ಉರಿದಿದೆ. ನಾಲ್ವರಲ್ಲಿ ಒಬ್ಬರು ಕಾರಿನೊಳಗಿಂದ ಕಿರುಚುವುದನ್ನು ಅದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಬೈಕ್​ ಸವಾರರೊಬ್ಬರು ಗಮನಿಸಿದ್ದಾರೆ. ತಕ್ಷಣ 20 ವರ್ಷದ ಮಹಿಳೆಯನ್ನು ಕಾರಿನಿಂದ ಹೊರಗೆಳೆಯಲಾಯಿತು. ಗಂಭೀರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅವರೂ ಮೃತಪಟ್ಟರು ಎಂದು ಬೈಕ್​ ಸವಾರ ತಿಳಿಸಿದ್ದಾರೆ.

Car accident in Canada 1

ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡಲು ಹಲವಾರು ಮಂದಿ ತಮ್ಮ ಕಾರುಗಳು ನಿಲ್ಲಿಸಿ, ಅಪಘಾತಕ್ಕೀಡಾದ ಕಾರಿನ ಗಾಜುಗಳನ್ನು ಒಡೆಯಲು ಪ್ರಯತ್ನಿಸಿದೆವು. ಆದರೂ ಪ್ರಯೋಜನವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಟೊರೊಂಟೋ ಫೈರ್ ಡೆಪ್ಯುಟಿ ಚೀಫ್ ಜಿಮ್ ಜೆಸ್ಸಾಪ್ ಮಾತನಾಡಿ, ಎಲೆಕ್ರಿಕಲ್​ ವಾಹನದ ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿತ್ತು. ಕೊನೆಗೂ ಬೆಂಕಿಯನ್ನು ನಂದಿಸಿ, ಕಾರಿನ ಬ್ಯಾಟರಿ ಸೆಲ್ ಅನ್ನು ಡಂಪ್‌ಸ್ಟರ್‌ನಲ್ಲಿ ವಿಲೇವಾರಿ ಮಾಡಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net