

ನವದೆಹಲಿ: ನಿರ್ಭಯಾ ಕೇಸ್ ಸುಲಭದಲ್ಲಿ ಇತ್ಯರ್ಥವಾಗುವಂತೆ ಗೋಚರಿಸುತ್ತಿಲ್ಲ. ಮಂಗಳವಾರ ಶಾಕಿಂಗ್ ನ್ಯೂಸ್ ಒಂದು ಪ್ರಸಾರವಾಗಿದ್ದು, ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟು ಮರಣದಂಡನೆ ಶಿಕ್ಷೆ ಘೋಷಿಸಲ್ಪಟ್ಟಿರುವ ಅಪರಾಧಿಗಳ ಪೈಕಿ ಮುಕೇಶ್ ಅಪರಾಧ ಸ್ಥಳದಲ್ಲೇ ಇರಲಿಲ್ಲ ಎಂಬ ಅಂಶ ಈಗ ಹೈಲೈಟ್ ಆಗಿದೆ. ಸುಪ್ರೀಂ ಕೋರ್ಟ್ ಮುಕೇಶ್ ಸಲ್ಲಿಸಲು ಹೊರಟಿದ್ದ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದ ಮರುದಿನವೇ ಮುಕೇಶ್ ಪರ ವಕೀಲರು ಹೀಗೊಂದು ವಾದದ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದಾರೆ!
ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳ್ಳಲು ಇನ್ನು ಮೂರು ದಿನಗಳಷ್ಟೇ ಬಾಕಿ ಇರುವ ಸಂದರ್ಭದಲ್ಲಿ ಈ ಟ್ವಿಸ್ಟ್ ಎಲ್ಲರ ಕುತೂಹಲ, ಆಕ್ರೋಶವನ್ನು ಹೆಚ್ಚಿಸಿದೆ. 2012ರ ನಿರ್ಭಯಾ ಗ್ಯಾಂಗ್ರೇಪ್ ಮತ್ತು ಹತ್ಯೆ ಕೇಸ್ನ ಅಪರಾಧಿ ಮುಕೇಶ್ ಪರ ವಕೀಲ ಎಂ.ಎಲ್.ಶರ್ಮಾ ಹೇಳುವ ಪ್ರಕಾರ, 2012ರ ಡಿಸೆಂಬರ್ 16ರಂದು ರಾತ್ರಿ ಅಪರಾಧ ನಡೆದ ಸ್ಥಳದಲ್ಲಿ ಮುಕೇಶ್ ಇರಲೇ ಇಲ್ಲ. ಈ ವಾದವನ್ನು ಮುಂದಿಟ್ಟುಕೊಂಡು ಎಂ.ಎಲ್.ಶರ್ಮಾ ಅವರು ದೆಹಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಹೊಸ ವಾದದ ಪ್ರಕಾರ, ಮುಕೇಶ್ನನ್ನು ಪೊಲೀಸರು ಬಂಧಿಸಿದ್ದು ರಾಜಸ್ಥಾನದಲ್ಲಿ. ಅದೂ ಘಟನೆ ನಡೆದ ಮಾರನೇ ದಿನ. ಇದಲ್ಲದೆ ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ಮತ್ತೆ ದೆಹಲಿ ಕೋರ್ಟ್ ಮೆಟ್ಟಿಲೇರಿರುವ ಮುಕೇಶ್ ಪರ ವಕೀಲರ ನಡೆ ಕುತೂಹಲ ಕೆರಳಿಸಿದೆ. ಅಪರಾಧಿಗಳ ಎಲ್ಲ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರೂ ಕ್ಷಮಾದಾನ ಅರ್ಜಿಯನ್ನೂ ತಿರಸ್ಕರಿಸಿದ್ದಾರೆ. ಹೀಗಿದ್ದಾಗ್ಯೂ, ಭಾನುವಾರ ಪುನಃ ನಾಲ್ಕೂ ಅಪರಾಧಿಗಳ ಕುಟುಂಬದವರು ಕೊನೇ ಪ್ರಯತ್ನ ಎಂಬಂತೆ ರಾಷ್ಟ್ರಪತಿಯವರಿಗೆ ಮೊರೆ ಹೋಗಿದ್ದರು.
ವರದಿಗಳ ಪ್ರಕಾರ, ರಾಷ್ಟ್ರಪತಿ ಭವನಕ್ಕೆ ಒಟ್ಟು 13 ಪತ್ರಗಳು ಈ ಅಪರಾಧಿಗಳ ಕುಟುಂಬದವರಿಂದ ಬಂದಿದ್ದು, ಈ ಪೈಕಿ ಮುಕೇಶ್ ಕುಟುಂಬದವರ ಎರಡು ಪತ್ರಗಳಿವೆ. ಪವನ್ ಮತ್ತು ವಿನಯ್ ಕುಟುಂಬದವರ ತಲಾ 4 ಪತ್ರಗಳು, ಅಕ್ಷಯ್ ಕುಟುಂಬದ 3 ಪತ್ರಗಳಿವೆ. ಸದ್ಯ ದೆಹಲಿ ಕೋರ್ಟ್ ಆದೇಶದ ಪ್ರಕಾರ, ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳನ್ನೂ ಗಲ್ಲಿಗೇರಿಸಬೇಕಾಗಿದೆ. (ಏಜೆನ್ಸೀಸ್)