

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾ. 20ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಲಿದ್ದು, ಇದಕ್ಕೂ ಮೂರು ದಿನ ಮೊದಲೇ ಹಾಜರಾಗುವಂತೆ ನೇಣುಕುಣಿಕೆ ಬಿಗಿಯಲಿರುವ ಹ್ಯಾಂಗ್ವ್ಯಾನ್ ಪವನ್ ಜಲ್ಲಾದ್ಗೆ ತಿಹಾರ್ ಸೆರೆಮನೆ ಅಧಿಕಾರಿಗಳು ಸೂಚಿಸಿದ್ದಾರೆ.
ನಾಲ್ಕನೇ ಡೆತ್ ವಾರಂಟ್ ಹೊರಡಿಸಿದ ನಂತರ ತಿಹಾರ್ ಜೈಲಧಿಕಾರಿಗಳು ಮೇರಠ್ನ ಹ್ಯಾಂಗ್ವ್ಯಾನ್ ಪವನ್ ಜಲ್ಲಾದ್ನ ಸೇವೆ ಒದಗಿಸುವಂತೆ ಕೋರಿದ್ದಾರೆ. ಮಾ. 17ರಂದು ಜಲ್ಲಾದ್ ಆಗಮಿಸಿದ ನಂತರ ಮತ್ತೊಮ್ಮೆ ನೇಣಿಗೇರಿಸುವ ಡಮ್ಮಿ ತಾಲೀಮು ನಡೆಯಲಿದೆ.
ದೆಹಲಿಯ ವಿಚಾರಣಾ ನ್ಯಾಯಾಲಯ ಮಾರ್ಚ್ 5ರಂದು ಹೊರಡಿಸಿರುವ ಹೊಸ ಡೆತ್ ವಾರಂಟ್ ಪ್ರಕಾರ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ರನ್ನು (31) ಮಾರ್ಚ್ 20ರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಬೇಕಾಗಿದೆ.