ತಿಹಾರ್​ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಮಾಡಿದ ಪಾಪಕ್ಕೆ ಕುಣಿಕೆಯಲ್ಲಿ ಹೋಯ್ತು ಜೀವ

Nirbhaya 2 Mrch 20
Published on

ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಗಲ್ಲಿಗೇರಿಸಲಾಗಿದೆ.

ಅಪರಾಧಿಗಳಾದ ಅಕ್ಷಯ್​ಕುಮಾರ್​, ಪವನ್​ ಗುಪ್ತಾ, ಮುಕೇಶ್​ ಸಿಂಗ್​ ಮತ್ತು ವಿನಯ್​ ಶರ್ಮಾರಿಗೆ ಸುಪ್ರೀಂಕೋರ್ಟ್​ ಗಲ್ಲುಶಿಕ್ಷೆಯನ್ನು ವಿಧಿಸಿದಾಗಿನಿಂದಲೂ ವಿಳಂಬವಾಗುತ್ತಲೇ ಬಂದಿತ್ತು. ಅಂತಿಮವಾಗಿ ಗುರುವಾರ (ಮಾ.19)ದಂದು ಅಪರಾಧಿಗಳ ಎಲ್ಲ ಕಾನೂನು ಪ್ರಕ್ರಿಯೆಗಳೂ ಮುಕ್ತಾಯವಾಗುವ ಮೂಲಕ, ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ಜಾರಿ ಮಾಡಿದ್ದ ಡೆತ್​ ವಾರೆಂಟ್​ನಂತೆ ಇಂದು (ಮಾ.20) ಮುಂಜಾನೆ 5.30ಕ್ಕೆ ನಾಲ್ವರೂ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ್ದಾರೆ.

ತಿಹಾರ್‍ ಜೈಲಿನ ಸುತ್ತ ರಾತ್ರಿಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ನಸುಕಿನ ವೇಳೆಯೇ ಆರೋಪಿಗಳನ್ನು ನೇಣುಗಂಬದ ಬಳಿ ಕೊಂಡೊಯ್ಯಲು ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದರು. ಮುಂಜಾನೆ 5 ಗಂಟೆಗೂ ಮುನ್ನವೇ ನಾಲ್ಕೂ ಆರೋಪಿಗಳನ್ನು ನೇಣುಗಂಬದ ಬಳಿಕ ಅಧಿಕಾರಿಗಳು ಕರೆದೊಯ್ದಿದ್ದರು. 5.34ರ ಹೊತ್ತಿಗೆ ಆರೋಪಿಗಳನ್ನು ನೇಣುಗಂಬಕ್ಕೆ ಏರಿಸಿ ಶಿಕ್ಷೆ ಜಾರಿಗೊಳಿಸಿರುವ ಸುದ್ದಿ ಬಹಿರಂಗವಾಗಿದೆ.

ಬದುಕುಳಿಯಲು ಕೊನೇ ಕ್ಷಣದವರೆಗೂ ಕಾನೂನು ಹೋರಾಟ ನಡೆಸಿದ ಅಪರಾಧಿಗಳು, ಮಾ.19ರಂದು ಸಂಜೆ ಕೂಡ ತಮ್ಮ ಮರಣದಂಡನೆಯನ್ನು ತಪ್ಪಿಸಿಕೊಳ್ಳಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್​, ಅಪರಾಧಿಗಳ ಅರ್ಜಿ ವಜಾಗೊಳಿಸಿ, ಗಲ್ಲುಶಿಕ್ಷೆಯನ್ನು ಅಂತಿಮಗೊಳಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net