ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನಾನು ನೇಣುಗಂಬಕ್ಕೆ ಏರಿಸಿದ ಬಳಿಕ ಜನರಿಗೆ ನನ್ನ ಮೇಲಿನ ಗೌರವ ಇಮ್ಮಡಿಯಾಗುತ್ತದೆ: ಹ್ಯಾಂಗ್​ಮನ್​ ಪವನ್​ ಕುಮಾರ್​

Convicts 24 Jan 20
Published on

ಮೇರಠ್​: ಮುಂದಿನ ತಿಂಗಳು ನೇಣುಗಂಬಕ್ಕೆ ಏರಲಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳ ಬಗ್ಗೆ ತಮಗೆ ಕಿಂಚಿತ್ತೂ ಸಹಾನುಭೂತಿಯಾಗಲೀ, ಕನಿಕರವಾಗಲೀ ಇಲ್ಲ ಎಂದು ಅವರನ್ನು ಗಲ್ಲಿಗೇರಿಸಲಿರುವ ಹ್ಯಾಂಗ್​ಮನ್​ ಪವನ್​ ಕುಮಾರ್​ ತಿಳಿಸಿದ್ದಾರೆ.

ನೇಣುಗಂಬಕ್ಕೇರಿ ಸಾಯುತ್ತಿರುವವರ ಈ ನಾಲ್ವರು ಮನುಷ್ಯರಲ್ಲ. ಮೃಗಗಳು. ಕ್ರೂರ ಜನರು. ಹಾಗಾಗಿಯೇ ಅವರೀಗ ಸಾಯುತ್ತಿದ್ದಾರೆ ಎಂದು ಮೇರಠ್​ನಲ್ಲಿರುವ ತಮ್ಮ ಮನೆಯ ಬಳಿ ಮಾಧ್ಯಮಗಳೆದುರು ತಮ್ಮ ಕೋಪ ಹೊರಹಾಕಿದ್ದಾರೆ.

ನನ್ನ ಕುಟುಂಬವೂ ಸೇರಿ ಸುತ್ತಲಿನ ಜನರೆಲ್ಲ ನನ್ನನ್ನು ಗೌರವಿಸುತ್ತಾರೆ. ಆದರೆ ಅಪರಾಧಿಗಳನ್ನು ನಾನು ಗಲ್ಲಿಗೇರಿಸಿದ ಬಳಿಕ ಜನರಿಗೆ ನನ್ನ ಮೇಲಿದ್ದ ಗೌರವ ಇಮ್ಮಡಿಯಾಗುತ್ತದೆ. ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಿದಾಗಲೇ ಅಪರಾಧಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಪವನ್​ ಕುಮಾರ್​ ಅವರ ಕುಟುಂಬ ಹ್ಯಾಂಗ್​ಮನ್​ ಕೆಲಸವನ್ನೇ ಮಾಡಿಕೊಂಡು ಬಂದಿದೆ. ಅವರ ಅಜ್ಜ, ಅಪ್ಪ ಎಲ್ಲರೂ ಹ್ಯಾಂಗ್​ಮನ್​ ಆಗಿದ್ದವರು. ಈಗ ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪವನ್​ ಕುಮಾರ್​ ಅವರಿಗೆ ಉತ್ತರ ಪ್ರದೇಶ ಸರ್ಕಾರ ವಹಿಸಿದೆ. ಇದೇ ಮೊದಲ ಬಾರಿಗೆ ಪವನ್​ ಕುಮಾರ್​ ಅವರ ಪಾಲಿಗೆ ಗಲ್ಲಿಗೇರಿಸುವ ಜವಾಬ್ದಾರಿ ಸಿಕ್ಕಿದ್ದು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕರು ಮತ್ತು 1982ರಲ್ಲಿ ನಡೆದ ಅಪಹರಣ ಮತ್ತು ಕೊಲೆ ಪ್ರಕರಣವೊಂದರ ಇಬ್ಬರು ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಇದೇ ಪವನ್​ಕುಮಾರ್ ಅವರ ತಾತ. 2012ರಲ್ಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಪವನ್​ಕುಮಾರ್ ಅವರನ್ನು ಆಯ್ಕೆ ಮಾಡಿದಾಗಿನಿಂದ ಅವರು ಮಾಧ್ಯಮಗಳ ಪಾಲಿಗೆ ಪ್ರಮುಖ ವ್ಯಕ್ತಿಯಾಗಿದ್ದಾರೆ. ಹಲವು ಪ್ರಮುಖ ಟಿವಿ, ಪೇಪರ್​ಗಳು ಅವರ ಸಂದರ್ಶನಕ್ಕಾಗಿ ಕಾಯುತ್ತಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net