ಸಹೋದರರ ಹತ್ಯೆಗೆ ಕೋಟಿ ರೂ. ಸುಪಾರಿ: ಸಂಚು ರೂಪಿಸಿದ್ದ ಒಂಬತ್ತು ಮಂದಿ ಬಂಧನ

SuFari
Published on

ಬೆಂಗಳೂರು: ಜೈಲಿನಲ್ಲಿದ್ದುಕೊಂಡೇ ಕೊಲೆಗೆ ಸುಪಾರಿ ಪಡೆದಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಹತ್ಯೆಗೆ ಸಂಚು ರೂಪಿಸಿ ಕೃತ್ಯಕ್ಕೆ ಮುಂದಾಗಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ಚೇತನ್ ಕುಮಾರ್ (31), ಹೆಗ್ಗನಹಳ್ಳಿ ನಿವಾಸಿ ರಾಜು (26), ಲಕ್ಕಸಂದ್ರದ ಅರ್ಜುನ್ (27), ಅಂದ್ರಹಳ್ಳಿಯ ಓಬಳಯ್ಯ (25), ಸತೀಶ್ ಕುಮಾರ್ (23), ಶಿವಕುಮಾರ್ (31), ಅಮಿತ್ (22), ನಾಗೇಶ್ (30) ಹಾಗೂ ದೇವರಾಜ್ (31) ಬಂಧಿತ ಆರೋಪಿಗಳು.

ಸೋಮವಾರ (ಜು. 27) ರಾತ್ರಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 9 ಮಂದಿಯಿದ್ದ ಗ್ಯಾಂಗ್ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಸುಪಾರಿ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಸುಪಾರಿ ಕೊಟ್ಟಿದ್ದ ವರಲಕ್ಷ್ಮೀ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕ್ಯಾಟ್ ರಾಜ ಮತ್ತು ಬಳ್ಳಾರಿ ಜೈಲಿನಲ್ಲಿರುವ ಹೇಮಂತ್​ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಮಾಕ್ಷಿಪಾಳ್ಯದ ನಿವಾಸಿ ವರಲಕ್ಷ್ಮೀ ಎಂಬಾಕೆ ವಕೀಲ ಹೇಮಂತ್​ಕುಮಾರ್ ಮತ್ತು ಅವನ ಸಹೋದರ ನಟರಾಜ್ ಹತ್ಯೆಗೆ ಕ್ಯಾಟ್ ರಾಜ ಮತ್ತು ಹೇಮಂತ್​ಗೆ 1 ಕೋಟಿ ರೂ. ಸುಪಾರಿ ಕೊಟ್ಟಿದ್ದಳು. ಇವರಿಬ್ಬರ ಸೂಚನೆಯಂತೆ ವಕೀಲ ಹೇಮಂತ್​ಕುಮಾರ್ ಮತ್ತು ನಟರಾಜ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಏನಿದು ಪ್ರಕರಣ?

2016ರಲ್ಲಿ ಕಾಮಾಕ್ಷಿಪಾಳ್ಯದಲ್ಲಿ ಚಿಕ್ಕತಮ್ಮೇಗೌಡ ಎಂಬಾತನ ಕೊಲೆಯಾಗಿತ್ತು. ಗೋವಿಂದೇಗೌಡನ ರಾಜಕೀಯ ಬೆಳವಣಿಗೆಗೆ ಅಡ್ಡಿಯಾದರು ಎಂಬ ಕಾರಣಕ್ಕೆ ಕೊಲೆ ಮಾಡಿಸಿದ್ದಾರೆ ಎಂದು ಚಿಕ್ಕತಮ್ಮೇಗೌಡನ ಸಹೋದರರು ಭಾವಿಸಿದ್ದರು. 2017ರಲ್ಲಿ ಗೋವಿಂದೇಗೌಡನ ಹತ್ಯೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹೇಮಂತ್ ಮತ್ತು ನಟರಾಜ್ ನಾಲ್ಕು ತಿಂಗಳಲ್ಲೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಪತಿಯ ಕೊಲೆಗೆ ಪ್ರತೀಕಾರವಾಗಿ ಸಹೋದರರಿಬ್ಬರ ಹತ್ಯೆಗೆ ವರಲಕ್ಷ್ಮೀ ಸಂಚು ರೂಪಿಸಿದ್ದಳು. ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದ ಲಕ್ಷ್ಮಣನ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ರೌಡಿ ಕ್ಯಾಟ್ ರಾಜ ಮತ್ತು ಹೇಮಂತ್ ಅಲಿಯಾಸ್ ಹೇಮಿಯನ್ನು ಸಂರ್ಪದ್ದಳು. ಒಂದು ಕೋಟಿ ರೂ. ಸುಪಾರಿ ಕೊಡುವ ಬಗ್ಗೆ ಮಾತುಕತೆಯಾಗಿ 25 ಲಕ್ಷ ರೂ.ಗಳನ್ನು ಮುಂಗಡವಾಗಿ ಕೊಟ್ಟಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net