

ಬೆಂಗಳೂರು: ವೃದ್ಧಾಪ್ಯ ಹತ್ತಿರವಾದಂತೆ ಬಾಂಧವ್ಯಗಳಿಂದ ಬೇರ್ಪಡುವ ಬಗ್ಗೆ ಮಾನಸಿಕವಾಗಿ ಸಿದ್ಧರಾಗುವುದರ ಜೊತೆಗೆ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡು ಸರಳ ಬದುಕು ಬಾಳಬೇಕು ಎಂದು ಮಾನಸಿಕ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.
ನಗರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ‘ ಜಿರೋಮ್ 2024’ ಭಾರತದಲ್ಲಿ ವಯೋಸಹಜ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಭೂತ, ಭವಿಷ್ಯ ಹಾಗೂ ವರ್ತಮಾನ’ ವಿಷಯ ಕುರಿತ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲಾ ವಾನಪ್ರಸ್ಥಾಶ್ರಮ ಎಂಬ ಪರಿಕಲ್ಪನೆಯಡಿ 60-65 ವರ್ಷಕ್ಕೆ ವ್ಯಕ್ತಿ ಎಲ್ಲವನ್ನೂ ತೊರೆದು ಕಾಡಿನತ್ತ ಮುಖ ಮಾಡುತ್ತಿದ್ದ. ಎಲ್ಲ ಬಾಂಧವ್ಯಗಳಿಂದ ಬೇರ್ಪಟ್ಟು ಹೊಣೆಗಾರಿಕೆಗಳಿಂದ ಬಿಡುಗಡೆ ಹೊಂದುವ ಮೂಲಕ ಜೀವನ ಸರಳಗೊಳಿಸಿಕೊಳ್ಳಲಾಗುತ್ತಿತ್ತು. ಆದರೆ ನಾವೀಗ 80-90 ವರ್ಷದಲ್ಲೂ ಸರಳ ಜೀವನದ ಬದಲು ಸಂಕೀರ್ಣತೆಯಲ್ಲಿ ಬದುಕುತ್ತಿರುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದರು.
ಮೋಹ - ನಿರೀಕ್ಷೆ ಬಿಟ್ಟು ಬದುಕಿರಿ: ವೃದ್ಧಾಪ್ಯದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾದಂತೆ ಇರಲು ಮೋಹ ಹಾಗೂ ಅತಿಯಾದ ನಿರೀಕ್ಷೆಗಳನ್ನು ಬಿಟ್ಟು ಬದುಕುವುದನ್ನು ಕಲಿಯಬೇಕು. ಇನ್ನೂ ಹಣ ಮಾಡಬೇಕು, ಮಕ್ಕಳನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕು ಎಂಬೆಲ್ಲಾ ಯೋಚನೆಯಿಂದ ಹೊರಬರಬೇಕು. 50ನೇ ವರ್ಷದಲ್ಲೇ ವೃದ್ಧಾಪ್ಯ ಜೀವನಕ್ಕೆ ಮಾನಸಿಕವಾಗಿ ಅಣಿಯಾಗಬೇಕು. ಜೀವನದ ನಮ್ಮ ಸೀಮಿತತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಂಡಿಯನ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಮೆಂಟಲ್ ಹೆಲ್ತ್ (ಐಎಜಿಎಂಎಚ್) ಅಧ್ಯಕ್ಷ ಡಾ. ಗೌತಮ್ ಸಹ ಮಾತನಾಡಿ, ವಯೋಸಹಜ ದೈಹಿಕ ಕಾಯಿಲೆ ತಡೆಗೆ ನೀಡಿದಷ್ಟು ಮಹತ್ವ ನಾವು ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ. ಜಾಗತಿಕವಾಗಿ 1930-1940ರ ಅವಧಿಯಲ್ಲಿ ಜೀವಿತಾವಧಿ ತೀರಾ ಕಡಿಮೆ ಇತ್ತು. ಆದರೆ, ಪ್ರಸ್ತುತ ಸರಾಸರಿ 69ವರ್ಷಕ್ಕೂ ಹೆಚ್ಚು ವರ್ಷ ಬದುಕುತ್ತಿದ್ದಾರೆ. ಹಾಗಾಗಿ ವೃದ್ಧರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದ ಅವರು, ಇದಕ್ಕಾಗಿ ಭಾರತ ಸರ್ಕಾರ ಬಜೆಟ್‌ನಲ್ಲಿ ವೃದ್ಧರ ಚಿಕಿತ್ಸೆಗೆ ಅನುದಾನ ಮೀಸಲಿಟಿದೆ. ಈ ಬಗ್ಗೆ ಐಎಜಿಎಂಎಚ್ ಸಂಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಿದೆ ಎಂದರು.
ನಿಮ್ಹಾನ್ಸ್ ಪ್ರಭಾರ ನಿರ್ದೇಶಕಿ ಡಾ.ಪ್ರಭಾ ಚಂದ್ರ, ಮನಃಶಾಸ್ತ್ರವಿಭಾಗದ ಮುಖ್ಯಸ್ಥ ಡಾ.ವಿವೇಕ್ ಬೆನೆಗಲ್ , ಸಮಾವೇಶ ಸಂಯೋಜಕ ಡಾ.ಪಿ.ಟಿ.ಶಿವಕುಮಾರ್ ಇತರರು ಇದ್ದರು.