

ಮಂಡ್ಯ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ರಾಜಕೀಯದ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಈಗ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಪರೋಕ್ಷ ಸುಳಿವು ನೀಡಿದ್ದಾರೆ. ಇವರ ಈ ಮಾತು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ನಿಖಿಲ್ ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ.
ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕುಮಾರಣ್ಣ ಸ್ಪರ್ಧೆಗೆ ಕಾರ್ಯಕರ್ತರ ಆಪೇಕ್ಷೆ ಇತ್ತು. ಮಹಿಳೆಯರು, ರೈತರು, ಹಿರಿಯರು ಎಲ್ಲಾ ವರ್ಗದವರು ಕುಮಾರಣ್ಣ ಅವ್ರನ್ನ ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷ ಪ್ರಮಾಣಿಕ ಕೆಲಸ ಮಾಡ್ತಾರೆ. ಶೀಘ್ರದಲ್ಲೇ ಚೆನ್ನಪಟ್ಟಣದಲ್ಲಿ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ನಂತರ ಮಂಡ್ಯದಲ್ಲಿ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು, ಸುಮಲತಾ ಅಂಬರೀಶ್ ಅವರು ಚುನಾವಣೆ ವೇಳೆ ವೇದಿಕೆ ಹಂಚಿಕೊಳ್ಳಲಾಗದಿದ್ದರೂ ಕುಮಾರಣ್ಣನ ಗೆಲುವಿಗೆ ಸಹಕಾರ ನೀಡಿದ್ದಾರೆ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ, ಮುಂದೆ ಸಂಪೂರ್ಣ ರಾಜಕಾರಣಿಯಾಗಿರುತ್ತೇನೆ.
ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕುಮಾರಣ್ಣ ನಿಲ್ಲಬೇಕು ಎಂಬ ಜನರ ಅಪೇಕ್ಷೆ ಮೇರೆಗೆ ಅವರು ಸ್ಪರ್ಧಿಸಿದ್ದಾರೆ. ಇನ್ನು ಐದು ವರ್ಷ ಕುಮಾರಣ್ಣ ಜನಪರ ಕೆಲಸ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನವರು ಗಂಡಸ್ತನದ ಬಗೆಗೆ ಮಾತಾಡ್ತಿದ್ದರು. ಈಗ ಜನ ಉತ್ತರ ಕೊಟ್ಟಿದ್ದಾರೆ. ಜನಪ್ರತಿನಿಧಿಗಳು ಬಹಳ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಏನು ಬೇಕಾದ್ರು ಮಾತನಾಡಬಹುದು ಎಂಬ ಉದ್ದಟತನ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್, ಸೀತಾರಾಮ ಕಲ್ಯಾಣ, ರೈಡರ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇನ್ನೂ ದರ್ಶನ್ ನಾಯಕ ನಟನೆಯ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡು ನಿಖಿಲ್ ಸೈ ಎನ್ನಿಸಿಕೊಂಡಿದ್ದರು. ಸದ್ಯ ನಿಖಿಲ್ ಅವರ ಕೈಯಲ್ಲಿ ಯದುವೀರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು ಇದೇ ಅವರ ಕೊನೆಯ ಚಿತ್ರವಾಗು ಸಾಧ್ಯತೆಗಳಿವೆ.