

ಡಲ್ಲಾಸ್: ಇಲ್ಲಿನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ 11ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಶಿಶು ಯುಎಸ್ಎ ಗೆದ್ದು ಬೀಗಿದ್ದು, ಅತಿಥೇಯರು ಪ್ರವಾಸಿ ತಂಡದ ಎದುರು ಗೆದ್ದು ಬೀಗಿದ್ದಾರೆ. ಕ್ರಿಕೆಟ್ ಶಿಶು ಎದುದರು ಪಾಕಿಸ್ತಾನ ಸೋಲುಂಡಿದ್ದು ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ ಆಟಗಾರರ ವೈಯಕ್ತಿಕ ವಿಚಾರಗಳನ್ನು ಕೆದಕಿ ಪಾಕ್ ಅಭಿಮಾನಿಗಳು ತಮ್ಮ ತಂಡದ ಆಟಗಾರರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇತ್ತ ಪಾಕಿಸ್ತಾನ ಯುಎಸ್ಎ ವಿರುದ್ಧ ಸೋತ ಬಳಿಕ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ಸೋತರೆ ಸೂಪರ್-8 ಪ್ರವೇಶಿಸದೆ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಯುಎಸ್ ತಾನು ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದ್ದು, ಇದು ಪಾಕಿಸ್ತಾನ ಪಾಲಿಗೆ ಮುಳುವಾಗಿದೆ.
ಚುಟುಕು ವಿಶ್ವಸಮರ ಶುರುವಾಗುವುದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಸೇನೆಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುಎಸ್ಎ ವಿರುದ್ಧ ಸೋಲಿನ ಬಳಿಕ ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುಎಸ್ಎ ವಿರುದ್ಧ ಸೋಲಲು ನಿಮಗೆ ಸೇನೆಯಿಂದ ತರಬೇತಿ ಬೇಕಿತ್ತಾ ಎಂದು ಟ್ರೋಲ್ ಮಾಡಲಾಗುತ್ತಿದೆ.
ಕ್ರಿಕೆಟ್ ಶಿಶುಗಳ ವಿರುದ್ಧ ಸೋಲಲು ನಿಮಗೆ ಮಿಲಿಟರಿ ಕಮಾಂಡೋಗಳಿಂದ ಟ್ರೈನಿಂಗ್ ಪಡೆಯುವ ಅವಶ್ಯಕತೆ ಇರಲಿಲ್ಲ. ಈ ರೀತಿಯ ಆಟವಾಡುವ ಬದಲು ಸುಮ್ಮನೇ ಮನೆಯಲ್ಲಿರುವುದೇ ವಾಸಿ. ಎಲ್ಲರೂ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದರೆ ಪಾಕಿಸ್ತಾನದವರು ಮಾತ್ರ ಸೇನೆಯಲ್ಲಿ ತರಬೇತಿ ಪಡೆಯುತ್ತಾರೆ ಎಂದು ಕ್ರೀಡಾಭಿಮಾನಿಗಳು ಲೇವಡಿಯಾಡಿದ್ದಾರೆ.