ಆಂಧ್ರದಲ್ಲಿ ಟಿಡಿಪಿ-ಜನಸೇನಾ ಗೆಲುವಿನ ಬೆನ್ನಲ್ಲೇ ನಟ ಪೊಸಾನಿ ಕೃಷ್ಣ ಸಿನಿಮಾ ಬದುಕು ಅಂತ್ಯ?

Posani Krishna Murali
Published on

ಅಮರಾವತಿ: ಇತ್ತೀಚಿಗೆ ಮುಕ್ತಾಯಗೊಂಡ ಆಂಧ್ರಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟ ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ಪ್ರಚಂಡ ದಿಗ್ವಿಜಯ ಸಾಧಿಸಿದ್ದು, ಚಂದ್ರಬಾಬು ನಾಯ್ಡು, ನಟ ಪವನ್​ ಕಲ್ಯಾಣ್​ ಹಾಗೂ ಪ್ರಧಾನಿ ಮೋದಿ ಅವರ ತಂತ್ರಗಾರಿಕೆ ಫಲಿಸಿದೆ.

ರಕ್ತಸಿಕ್ತ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶ ರಾಜ್ಯ ರಾಜಕಾರಣದಲ್ಲಿ ನಟ-ನಟಿಯರು ಹೆಚ್ಚು ಖ್ಯಾತಿ ಪಡೆದಿದ್ದು, ಈ ಪೈಕಿ ಪೊಸಾನಿ ಕೃಷ್ಣ ಮುರಳಿ ಅವರು ಕೂಡ ರಾಜಕೀಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅವರ ಮ್ಯಾನರಿಸಂ, ಡೈಲಾಗ್​ ಡೆಲಿವರಿ ಮೂಲಕ ಅಭಿಮಾನಿ ಬಳಗವನ್ನು ಹೊಂದಿರುವ ಪೊಸಾನಿ ಮಾಜಿ ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಸೇರಿ ಆಂಧ್ರ ಫಿಲ್ಮ್​ ಚೇಂಬರ್​ ಅಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಈ ಮೊದಲು ಪ್ರಜಾರಾಜ್ಯಂ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪೊಸಾನಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಆ ಬಳಿಕ ವೈಎಸ್​ಆರ್​ ಕಾಂಗ್ರೆಸ್​ ಸೇರಿದ ಅವರು ನಟರಾದ ಪವನ್​ ಕಲ್ಯಾಣ್​, ಚಿರಂಜೀವಿ ಹಾಗೂ ಅವರ ಕುಟುಂಬದವರನ್ನು ನಿರಂತರವಾಗಿ ಟೀಕಿಸಲು ಶುರು ಮಾಡಿದರು. ಅದು ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

Posani Krishna Murali

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನರು ಟಿಡಿಪಿ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸಿದ್ದು, ಈಗ ಪೊಸಾನಿ ಕೃಷ್ಣ ಮುರಳಿ ಅವರಿಗೆ ಇದು ಮುಳುವಾಗಿದೆ. ಏಕೆಂದರೆ ಚಿರಂಜೀವಿ ಹಾಗೂ ಪವನ್​ ಕಲ್ಯಾಣ್​ ಅವರನ್ನು ಟೀಕಿಸುತ್ತಾ ಬಂದಿರುವ ಇವರಿಗೆ ಈಗ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಲಾಗಿದೆ. ದಿನ ಕಳೆದಂತೆ ಅವರಿಗೆ ಸಿನಿಮಾದ ಆಫರ್​ಗಳು ಇಲ್ಲದಂತಾಗುತ್ತಿದ್ದು, ಅವರು ಆಡಿದ ಮಾತುಗಳೇ ಅವರ ಪಾಲಿಗೆ ಮುಳುವಾಯ್ತು ಎಂದು ಹೇಳಲಾಗುತ್ತಿದೆ.

ಈಗ ಟಿಡಿಪಿ ಮೈತ್ರಿ ಆಂಧ್ರ ಪ್ರದೇಶದಲ್ಲಿ ಗೆಲುವು ಕಂಡಿದೆ. ಈಗ ಪೋಸಾನಿ ಅವರು ಪವನ್ ವಿರುದ್ಧ ಮತ್ತೆ ಹರಿಹಾಯುತ್ತಾರಾ ಅಥವಾ ಸುಮ್ಮನಾಗುತ್ತಾರಾ ಎಂದು ಕಾದುನೋಡಬೇಕಿದೆ. ಪೊಸಾನಿ ವೃತ್ತಿ ಬದುಕು ಸಂಪೂರ್ಣವಾಗಿ ಕೊನೆ ಆಯಿತು ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net