ಲೋಕಸಮರ: ಮಂಡ್ಯದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್!

hdk
Published on

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಮಾರ್ಚ್ 25ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಶುಕ್ರವಾರ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಲೋಕಸಭೆ ಚುನಾವಣೆಗೆ ನಿಲ್ಲಲು ನಿಖಿಲ್​ನನ್ನು ಒಪ್ಪಿಸಲು ಮುಂದಾಗುತ್ತೇನೆ. ನಿಮ್ಮ ಆಸೆಗೆ ನಾವು ಭಂಗ ತರಲ್ಲ. ಪುತ್ರ ನಿಖಿಲ್ ಕುಮಾರಸ್ವಾಮಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಲ್ಲ. ನಿಮ್ಮ ಆಸೆಯ ಪ್ರಕಾರ ಅದನ್ನು ನೆರವೇರಿಸಿಕೊಳ್ಳುತ್ತೇನೆ. ಮಾರ್ಚ್ 21ಕ್ಕೆ ನನಗೆ ಆಪರೇಷನ್ ಇದೆ. ಆದ್ದರಿಂದ ಮಾರ್ಚ್ 25ರಂದು ಮಂಡ್ಯಕ್ಕೆ ಬಂದು ಅಭ್ಯರ್ಥಿ ಘೋಷಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ಮೂಲಕ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಮಂಡ್ಯದಿಂದ ಕಣಕ್ಕಿಳಿಸುತ್ತೇನೆ ಎಂದು ಹೇಳಿದರು. ಇದರೊಂದಿಗೆ ಮಂಡ್ಯ ಜೆಡಿಎಸ್​ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಂತಾಗಿದೆ.

ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅಭಿಮಾನಿಗಳು, ನಾಯಕರು ನಿಖಿಲ್‌ ಸ್ಪರ್ಧೆ ಮಾಡಬೇಕೆಂದು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ, ಪುತ್ರನನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಮಾರ್ಚ್ 25ರಂದು ಘೋಷಣೆ ಮಾಡಲಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಂಡಿದೆ. ಒಂದು ಕಾಲದಲ್ಲಿ ಜೆಡಿಎಸ್​ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಕಾಂಗ್ರೆಸ್ ಎಂಟ್ರಿಕೊಟ್ಟಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್​ 6 ಕ್ಷೇತ್ರದಲ್ಲಿ ಗೆಲುವುಸಾಧಿಸಿ ಪ್ರಾಬಲ್ಯ ಮೆರೆದಿದ್ದು, ಲೋಕಸಭೆ ಚುನಾವಣೆಯಲ್ಲೂ ಗೆಲುವು ಪಡೆಯುವ ಉತ್ಸಾಹದಲ್ಲಿದೆ.

ಜೆಡಿಎಸ್​ ಮಂಡ್ಯವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧಿಸುವಂತೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಮನವಿ ಮಾಡುತ್ತಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಕೋಲಾರ, ಹಾಸನ, ಮಂಡ್ಯ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಮಂಡ್ಯ ಸಂಸದೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್​ಗೆ ಭಾರೀ ನಿರಾಸೆಯಾಗಿದೆ. ಮುಂದಿನ ಅವರ ನಡೆ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net