

ಹುಣಸೂರು: ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್, ಮೈಸೂರಿನ ಎನ್‌ಐಇ ಕಾಲೇಜು ಮತ್ತು ಹುಣಸೂರು ಡೀಡ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಬಿಲ್ಲೇನಹೊಸಳ್ಳಿ ಹಾಡಿಯಲ್ಲಿ ಸ್ಥಾಪಿಸಿರುವ ನವೀಕರಿಸಬಹುದಾದ ಮೈಕ್ರೋಗ್ರಿಡ್ ವಿದ್ಯುತ್ ಯೋಜನೆ ‘ಆಶಾಜ್ಯೋತಿ’ಗೆ ಶಾಸಕ ಜಿ.ಡಿ.ಹರೀಶ್‌ಗೌಡ ಬುಧವಾರ ಚಾಲನೆ ನೀಡಿದರು.
ಬಿಲ್ಲೇನಹೊಸಳ್ಳಿ ಹಾಡಿಯಲ್ಲಿ 73 ಮನೆಗಳಿಗೆ ವಿದ್ಯುತ್ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಂಪ್ರದಾಯಿಕ ಇಂಧನ ಮೂಲಗಳ ಕೊರತೆ ಕಾಡುತ್ತಿರುವ ಈ ಸಂಕೀರ್ಣ ಪರಿಸ್ಥಿತಿಯಲ್ಲಿ ಎನ್‌ಐಇ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಶ್ರಯ ಹಸ್ತ ಟ್ರಸ್ಟ್ ಸಂಸ್ಥೆಯು ಹೈಬ್ರಿಡ್ ತಂತ್ರಜ್ಞಾನಗಳ ಮೂಲಕ ಮೈಕ್ರೋಗ್ರಿಡ್ ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮಾಲಿನ್ಯ ತುಂಬುತ್ತಿರುವ ಸಂದರ್ಭದಲ್ಲಿ ಆಶಾಜ್ಯೋತಿ ಯೋಜನೆಯಡಿ ಶುದ್ಧ ಇಂಧನ(ಕ್ಲೀನ್ ಎನರ್ಜಿ) ಶೂನ್ಯ ಇಂಗಾಲ ಹೊರಸೂಸುವಿಕೆಯ ತಂತ್ರಜ್ಞಾನ ನೀಡುವ ಮೂಲಕ ಆರೋಗ್ಯವನ್ನು ರಕ್ಷಿಸುವ ಮಹತ್ತರ ಕಾರ್ಯ ಆಗುತ್ತಿದೆ. ಯೋಜನೆ ನನ್ನ ಕ್ಷೇತ್ರಕ್ಕೆ ಬಂದಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು ಹೇಳಿದರು.
ಎನ್‌ಐಇ ಕಾಲೇಜಿನ ವಿದ್ಯಾರ್ಥಿಗಳು ಇಂತಹ ಹೊಸ ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕ ಸಮುದಾಯಕ್ಕೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಸಂಸ್ಥೆ ಯೋಜನೆಗಾಗಿ 30 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವ ಮೂಲಕ ಹಾಡಿಯ ಗಿರಿಜನರ ಬದುಕಿಗೆ ಬೆಳಕಾಗಿದೆ. ತಾಲೂಕಿನ 37 ಹಾಡಿಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪಿಎಂ ಜನಮನ ಯೋಜನೆ ಜಾರಿಗೊಂಡಿದ್ದು, ಸರ್ಕಾರೇತರ ಸಂಘ, ಸಂಸ್ಥೆಗಳಿಂದ ಇಂತಹ ಸಹಕಾರ ಸಿಕ್ಕಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಆಶ್ರಯ ಹಸ್ತ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೆ.ದಿನೇಶ್ ಮಾತನಾಡಿ, ವಿಶ್ವ ಸಂಸ್ಥೆಯ ಸಮೀಕ್ಷೆಯಂತೆ ದೇಶದಲ್ಲಿ 64 ಲಕ್ಷ ಮನೆಗಳು ಇಂದಿಗೂ ಕತ್ತಲೆಯಲ್ಲಿವೆ. ವಿದ್ಯುತ್ ಪೂರೈಕೆ ಮೂಲಕ ಗ್ರಾಮೀಣ ಜನರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಮ್ಮ ಟ್ರಸ್ಟ್ ದೇಶದ 26 ಜಿಲ್ಲೆಗಳಲ್ಲಿ 76ಕ್ಕೂ ಹೆಚ್ಚು ಒಡಂಬಡಿಕೆಯ ಮೂಲಕ ಜನರ ನೆರವಿಗೆ ನಿಂತಿದೆ ಎಂದರು.
ಎನ್‌ಐಇ ಕಾಲೇಜಿನ ಮುಖ್ಯಸ್ಥ ಎನ್.ಶ್ಯಾಮ್‌ಸುಂದರ್ ಮಾತನಾಡಿ, ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಮೈಕ್ರೋಗ್ರಿಡ್ ಅಳವಡಿಸಿ ವಿದ್ಯುತ್ ಉತ್ಪಾದನೆ ಕೈಗೊಳ್ಳುತ್ತಿರುವುದು ದೇಶದಲ್ಲೇ ಮೊದಲ ಬಾರಿಯಾಗಿದೆ. ಯೋಜನೆಯು ವಿಶ್ವಾಸಾರ್ಹ ವಿದ್ಯುತ್ ಸರಬರಾಜು, ಪೋರ್ಟಬಲ್, ದೃಢವಾದ ಮತ್ತು ಬಾಳಿಕೆ ಬರುವ ಯೋಜನೆಯಾಗಿದೆ. ಹೈಬ್ರಿಡ್ ತಂತ್ರಜ್ಞಾನ, ರಿಮೋಟ್‌ನಿಂದ ನಿಯಂತ್ರಣ, ವಿವಿಧ ಸಮುದಾಯ ಮಟ್ಟದ ಬಳಕೆಗೆ ಸೂಕ್ತವಾದ ಮತ್ತು ವಿಸ್ತರಿಸಬಹುದಾದ ವಿನ್ಯಾಸವನ್ನು ಹೊಂದಿದೆ ಎಂದರು.
ನೇರಳಕುಪ್ಪೆ ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್, ಟ್ರಸ್ಟಿಗಳಾದ ಆಶಾ ದಿನೇಶ್, ದಿವ್ಯಾ ದಿನೇಶ್, ಸೋನಿಯಾ, ವಿಕ್ರಂ, ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ದಲಿತ ಮುಖಂಡ ಹರಿಹರ ಆನಂದಸ್ವಾಮಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ, ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ರಮೇಶ್, ಹಾಡಿಯ ಜನರು ಹಾಜರಿದ್ದರು.