ಐಸಿಸ್ ಬಾಂಬ್ ಫ್ಯಾಕ್ಟರಿ?; ಬಳ್ಳಾರಿ ಘಟಕ ಪತ್ತೆ ಹಚ್ಚಿದ ಎನ್​ಐಎ ಅಧಿಕಾರಿಗಳು

nia
Published on

ಬೆಂಗಳೂರು/ಬಳ್ಳಾರಿ: ಬಳ್ಳಾರಿಯಲ್ಲಿ ಐಸಿಸ್ ಚಟುವಟಿಕೆ ಸಂಘಟಿಸುತ್ತಿದ್ದ ಮಿನಾಜ್ ಅಲಿಯಾಸ್ ಮಹಮದ್ ಸುಲೈಮಾನ್ ಸೇರಿ 8 ಶಂಕಿತ ಉಗ್ರರು ರಾಷ್ಟ್ರೀಯ ತನಿಖಾ ದಳದ (ಎನ್​ಐಎ) ಬಲೆಗೆ ಸೋಮವಾರ ಬಿದ್ದಿದ್ದಾರೆ. ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಸುಧಾರಿತ ಬಾಂಬ್​ಗಳನ್ನು (ಐಇಡಿ) ತಯಾರಿಸಿ ದೇಶದಲ್ಲಿ ಉಗ್ರ ಕೃತ್ಯ ಎಸಗಲು ಐಸಿಸ್ ಉಗ್ರರು ಸಂಚು ರೂಪಿಸಿದ್ದ ಆಘಾತಕಾರಿ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ. ಶಂಕಿತರನ್ನು ಬಂಧಿಸುವುದರೊಂದಿಗೆ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತಾಗಿದೆ.

ಭಾರತದ ವಿರುದ್ಧ ಐಸಿಸ್ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಮತ್ತು ಸಂಚನ್ನು ನಿಷ್ಕ್ರಿಯಗೊಳಿಸಲು ಎನ್​ಐಎ ನಿರಂತರವಾಗಿ ದೇಶದೆಲ್ಲೆಡೆ ಕಾರ್ಯಾಚರಣೆ ಮುಂದುವರಿಸಿದೆ. ಡಿ.14ರಂದು ಐಸಿಸ್ ಪ್ರೇರಿತ ‘ಬಳ್ಳಾರಿ ಘಟಕ’ದ ವಿರುದ್ಧ ದೆಹಲಿ ಎನ್​ಐಎ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ರಾಜ್ಯ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಜತೆಗೆ ಸಂಪರ್ಕದಲ್ಲಿದ್ದುಕೊಂಡು ಸೋಮವಾರ ಬೆಳ್ಳಂಬೆಳಗ್ಗೆ ಬಳ್ಳಾರಿ, ಬೆಂಗಳೂರು, ಮಹಾರಾಷ್ಟ್ರದ ಮುಂಬೈ, ಅಮರಾವತಿ, ಪುಣೆ ಹಾಗೂ ಜಾರ್ಖಂಡ್​ನ ಜಮ್ೆಡ್​ಪುರ, ಬೊಕಾರೊ ಹಾಗೂ ದೆಹಲಿಯ 19 ಸ್ಥಳಗಳಲ್ಲಿ ಎನ್​ಐಎ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಐಸಿಸ್​ನ ಎಂಟು ಶಂಕಿತರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ಬಾಡಿಗೆ ಮನೆಯಲ್ಲಿ 7 ಕೆ.ಜಿ. ಪೊಟ್ಯಾಶಿಯಂ ನೈಟ್ರೇಟ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಬಂಧಿತ ಶಂಕಿತರು ಉಗ್ರವಾದದ ಪ್ರಚಾರ ಹಾಗೂ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಪ್ರಮುಖ ಆರೋಪಿ ಮಿನಾಜ್ ನಾಯಕತ್ವದಲ್ಲಿ ಇತರರು ಕಾರ್ಯನಿರ್ವಹಿಸುತ್ತಿದ್ದರು.

ದಾಳಿ ವೇಳೆ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳಾದ ಸಲ್ಪರ್, ಪೊಟ್ಯಾಶಿಯಂ ನೈಟ್ರೇಟ್, ಇದ್ದಿಲು, ಗನ್​ಪೌಡರ್, ಶುಗರ್ ಮತ್ತು ಎಥೆನಾಲ್​ಗಳು ಪತ್ತೆಯಾಗಿವೆ. ಹರಿತವಾದ ಆಯುಧಗಳು, ಲಕ್ಷಾಂತರ ರೂ. ನಗದು ಮತ್ತು ಪ್ರಚೋದನಕಾರಿ ಪೋಸ್ಟರ್​ಗಳು, ದಾಖಲೆ ಪತ್ರಗಳು, ಸ್ಮಾರ್ಟ್​ಫೋನ್​ಗಳು ಮತ್ತು ಡಿಜಿಟಲ್ ಸಾಧನಗಳು ಶಂಕಿತರಿದ್ದ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿರುವುದಾಗಿ ಎನ್​ಐಎ ತಿಳಿಸಿದೆ. ಇತ್ತೀಚೆಗೆ 44 ಸ್ಥಳಗಳಲ್ಲಿ ಎನ್​ಐಎ ಅಧಿಕಾರಿಗಳ ದಾಳಿ ನಡೆಸಿ, ಶಂಕಿತರನ್ನು ಬಂಧಿಸಿದ್ದರು.

ವಿದ್ಯಾರ್ಥಿಗಳೇ ಟಾರ್ಗೆಟ್: ಐಸಿಸ್ ಬಳ್ಳಾರಿ ಘಟಕದ ಶಂಕಿತರು, ಸಂಘಟನೆ ಬಲಗೊಳಿಸಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದರು. ವಿದ್ಯಾರ್ಥಿಗಳನ್ನು ಸಂರ್ಪಸಿ ಜಿಹಾದ್ ಬೋಧನೆ ಮತ್ತು ಮತೀಯವಾದವನ್ನು ಅವರ ತಲೆಗೆ ತುಂಬಿ ಐಸಿಸ್​ಗೆ ನೇಮಕಾತಿ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಜಿಹಾದ್ ಸಂಬಂಧ ಫೋಸ್ಟರ್, ಪುಸ್ತಕಗಳನ್ನು ವಿತರಿಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಗೊಂದು ಘಟಕ ಸ್ಥಾಪನೆ ಶಂಕೆ ?: ದೇಶದ ಎಲ್ಲೆಡೆ ಐಸಿಸ್ ಉಗ್ರ ಸಂಘಟನೆಯ ಘಟಕಗಳನ್ನು ತೆರೆಯಲಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ 44 ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್​ಐಎ ಅಧಿಕಾರಿಗಳು ಮಹಾರಾಷ್ಟ್ರ ಘಟಕವನ್ನು ಪತ್ತೆಹಚ್ಚಿದ್ದರು. ಇದೀಗ ‘ಬಳ್ಳಾರಿ ಘಟಕ’ವನ್ನು ಬೇಧಿಸಿದ್ದಾರೆ. ಇದರ ಅಧ್ಯಕ್ಷ ಮಿನಾಜ್ ಅಲಿಯಾಸ್ ಎಂ.ಡಿ. ಸುಲೈಮಾನ್​ನ್ನು ಬಂಧಿಸಿದ್ದಾರೆ. ಇದೇ ರೀತಿಯಲ್ಲಿ ದೇಶದ ಎಲ್ಲೆಡೆ ಐಸಿಸ್ ಮಾದರಿ ಘಟಕಗಳನ್ನು ತೆರೆದು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಎನ್​ಐಎ ಸಾಕಷ್ಟು ಐಸಿಸ್ ಘಟಕಗಳನ್ನು ಪತ್ತೆಹಚ್ಚಿ ಶಂಕಿತರನ್ನು ಬಂಧಿಸಿದೆ ಎಂದು ಎನ್​ಐಎ ತಿಳಿಸಿದೆ.

ಬಂಧಿತರ ವಿವರ: ಬಳ್ಳಾರಿಯ ಮಿನಾಜ್ ಅಲಿಯಾಸ್ ಎಂ.ಡಿ. ಸುಲೈಮಾನ್ ಮತ್ತು ಸೈಯದ್ ಸಮೀರ್. ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್ ಸಮಿ, ಎಂ.ಡಿ. ಮುಝುಮ್ಮಿಲ್. ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರಜ್ಮಾನ್ ಅಲಿಯಾಸ್ ಹುಸೇನ್ ಮತ್ತು ಜಾರ್ಖಂಡ್ ಮೂಲದ ಎಂ.ಡಿ. ಶಹಬಾಜ್ ಅಲಿಯಾಸ್ ಜುಲ್ಪಿಕರ್ ಅಲಿಯಾಸ್ ಗುಡ್ಡು ಬಂಧಿತರು.

ಬಂಧಿತರ ಉದ್ದೇಶ ಏನಿತ್ತು?

  • ಶಂಕಿತರು ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಉಗ್ರ ಕೃತ್ಯಕ್ಕೆ ಸುಧಾರಿತ ಸ್ಪೋಟಕ ತಯಾರಿಸಲು ಸಜ್ಜಾಗಿದ್ದರು. ಜಿಹಾದ್, ಖಿಲಾಫತ್, ಐಸಿಸ್ ಇತ್ಯಾದಿ ಮಾರ್ಗಗಳನ್ನು ಅನುಸರಿಸಿದ್ದರು.
  • ಯಾವುದೇ ಸುಳಿವು ಸಿಗದಿರಲು ಎನ್ಕ್ರಿಪ್ಷನ್ ಆಪ್​ಗಳ ಮೂಲಕ ಸಂಪರ್ಕದಲ್ಲಿದ್ದರು. ಉಗ್ರ ಸಂಘಟನೆಗೆ ನೇಮಕಾತಿ ಮಾಡಲು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು.
  • ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದ್ದೀನ್ ನೇಮಕಾತಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮಾಡಿ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದರು.
  • ಐಸಿಸ್ ಬಳ್ಳಾರಿ ಘಟಕದ ಮುಖ್ಯಸ್ಥ ಮಿನಾಜ್ ನೇತೃತ್ವದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ನಡೆದಿತ್ತು. ಐಸಿಸ್ ಮುಖ್ಯಸ್ಥರು, ಏಜೆಂಟ್​ಗಳು ಜತೆ ಮಿನಾಜ್ ನೇರ ಸಂಪರ್ಕದಲ್ಲಿದ್ದ. ಭಯೋತ್ಪಾದಕ ಕೃತ್ಯಗಳು ಮತ್ತು ನಿಷೇಧಿತ ಸಂಘಟನೆ ಐಸಿಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net