

ಪುಣೆ: ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರೊವಿಯೆನ್ಸ್ ಗುಂಪಿನ ಆತ್ಮಾಹುತಿ ಬಾಂಬರ್ ಮಹಿಳೆ ಸೇರಿ ಇಬ್ಬರನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಸ್ಥಳೀಯ ಪೊಲೀಸರ ನೆರವಿನೊಂದಿಗೆ ಭಾನುವಾರ ಬಂಧಿಸಿದೆ. ಫಿದಾಯೇ ಎಂದು 2018ರಲ್ಲಿ ಗುರುತಿಸಲ್ಪಟ್ಟ ಮಹಿಳೆ ಈಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಉಗ್ರ ಚಟುವಟಿಕೆ ಸಂಬಂಧ ಕೇಸ್ನಲ್ಲಿ ಇವರನ್ನು ಎನ್ಐಎ ವಶಕ್ಕೆ ತೆಗೆದುಕೊಂಡಿದೆ.
ಬಂಧಿತ ಮಹಿಳೆಯನ್ನು ಸಾದಿಯಾ ಅನ್ವರ್ ಶೇಖ್ ಎಂದು ಗುರುತಿಸಲಾಗಿದೆ. ಈಕೆಯ ಜತೆಗೆ ನಬೀಲ್ ಸಿದ್ಧಿಖಿ ಖತ್ರಿ ಎಂಬಾತನನ್ನೂ ಎನ್ಐಎ ಬಂಧಿಸಿದೆ. ಇವರು ಪುಣೆಯ ಯೆರವಾಡ, ಕೊಂಧ್ವಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದರು.
ಇದನ್ನೂ ಓದಿ: ಹಳ್ಳ ಹಿಡಿದ ಕೆಐಎಡಿಬಿ ಅವ್ಯವಹಾರ ತನಿಖೆ
ಪೊಲೀಸ್ ಮಾಹಿತಿ ಪ್ರಕಾರ, 2018ರಲ್ಲೇ ಸಾದಿಯಾ ಅನ್ವರ್ ಶೇಖ್ ಬಗ್ಗೆ ಅಲರ್ಟ್ ಘೋಷಣೆಯಾಗಿತ್ತು. ಅದರಲ್ಲಿ ಆಕೆ ಒಂದು ಉಗ್ರ ಸಂಘಟನೆಯ ಫಿದಾಯೇ (ಆತ್ಮಾಹುತಿ ಬಾಂಬರ್) ಎಂಬ ಬಗ್ಗೆಯೂ ಮಾಹಿತಿ ಇತ್ತು. 2015ರಿಂದಲೇ ಆಕೆಯ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದ್ದು, ಆಕೆಯ ಕುಟುಂಬ ಸದಸ್ಯರು ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಒಂದೇ ದಿನ 45 ಸಾವು!
ಬಂಧಿತ ಇಬ್ಬರು ಪುಣೆ ಆಸುಪಾಸಿನಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ದೆಹಲಿಯಿಂದ ಲಭಿಸಿತ್ತು. ದೆಹಲಿಯಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟ ಉಗ್ರರಿಬ್ಬರು ಇವರಿಬ್ಬರ ಬಗ್ಗೆ ಮಾಹಿತಿ ದೆಹಲಿ ಪೊಲೀಸರಿಗೆ ನೀಡಿದ್ದರು. ಹಾಗೆ ಈ ಕಾರ್ಯಾಚರಣೆ ನಡೆದಿತ್ತು. (ಏಜೆನ್ಸೀಸ್)