ಒಂದೇ ದಿನ 45 ಸಾವು!

BVK Iyengar road on sunday lockdown
Published on

ಬೆಂಗಳೂರು: ನಗರದಲ್ಲಿ ಕರೊನಾ ಸೋಂಕಿತರ ಸಾವಿನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಭಾನುವಾರ 45 ಜನರು ಬಲಿಯಾಗಿದ್ದಾರೆ. ಹೊಸದಾಗಿ 1,525 ಪ್ರಕರಣಗಳು ದಾಖಲಾಗಿವೆ. ಸೋಂಕು ಕಾಣಿಸಿಕೊಂಡ 50 ವರ್ಷ ಮೇಲ್ಪಟ್ಟವರಲ್ಲಿ ಬಹುತೇಕರು ಗಂಭೀರ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಭಾನುವಾರ ಅಸುನೀಗಿದವರಲ್ಲಿ 50 ವರ್ಷ ಮೇಲ್ಪಟ್ಟ 31 ಮಂದಿ, 17 ವರ್ಷದ ಯುವತಿ ಹಾಗೂ 12 ಜನರು ಮಧ್ಯವಯಸ್ಕರಾಗಿದ್ದಾರೆ. 16 ದಿನದ ಮಗು ಜು.1ರಂದು ಮೃತಪಟ್ಟಿದ್ದು, ಅರೋಗ್ಯ ಇಲಾಖೆ 12 ದಿನದ ನಂತರ ಮಾಹಿತಿ ನೀಡಿದೆ. ರಾಜಧಾನಿಯಲ್ಲಿ ಈವರೆಗೆ 274 ಜನರನ್ನು ಸೋಂಕು ಆಹುತಿ ಪಡೆದಿದೆ. ರಾಜಧಾನಿಯಲ್ಲೀಗ ಒಟ್ಟಾರೆ ಸೋಂಕಿತರ ಸಂಖ್ಯೆ 18,387ಕ್ಕೆ ಏರಿಕೆಯಾಗಿದೆ. ಭಾನುವಾರ 206 ಜನರು ಗುಣಮುಖರಾಗಿದ್ದು, ಈವರೆಗೆ 4,045 ಮಂದಿ ಮನೆಗೆ ಮರಳಿದಂತಾಗಿದೆ. 14,067 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐವರು ವಾರಿಯರ್ಸ್​ಗೆ ಸೋಂಕು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವೈದ್ಯರು, ಇಬ್ಬರು ನರ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್​ಗೆ ಸೋಂಕು ದೃಢಪಟ್ಟಿದೆ.

ಪಿಪಿಇ ಕಿಟ್ ನೋಡಿ ಆತಂಕ: ನಾಗವಾರ ಸರ್ಕಲ್ ಬಳಿಯ ರಸ್ತೆ ಬದಿ ಬಳಸಿರುವ ಪಿಪಿಇ ಕಿಟ್​ಗಳನ್ನು ಎಸೆಯಲಾಗಿದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಿಲಿಕಾನ್​ಸಿಟಿಯಲ್ಲಿ ಪ್ರತಿದಿನ ಈ ರೀತಿಯ ಪ್ರಕರಣ ಬೆಳಕಿಗೆ ಬರುತ್ತಿವೆ. ಮೊನ್ನೆಯಷ್ಟೇ ಹಳೆಯ ಮದ್ರಾಸ್ ರಸ್ತೆಯಲ್ಲಿ ಬಳಸಿದ್ದ ಪಿಪಿಇ ಕಿಟ್​ಗಳು ಪತ್ತೆಯಾಗಿದ್ದವು. ಇದೀಗ ಟಿನ್ ಫ್ಯಾಕ್ಟರಿ ಹಾಗೂ ನಾಗವಾರ ಬಳಿ ಕಿಟ್​ಗಳು ಕಂಡುಬಂದಿವುದರಿಂದ ಸ್ಥಳೀಯರು ಸೋಂಕು ತಗುಲುವ ಆತಂಕಕ್ಕೀಡಾಗಿದ್ದಾರೆ.

ಚಿಕಿತ್ಸೆ ಸಿಗದೆ ಮಹಿಳೆ ಸಾವು ತೀವ್ರ ಉಸಿರಾಟದಿಂದ ಬಳಲುತ್ತಿದ್ದ 60 ವರ್ಷದ ಮಹಿಳೆಯು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವಿಗೀಡಾಗಿರುವುದು ವಿಕ್ಟೋರಿಯಾ ಆಸ್ಪತ್ರೆ ಬಳಿ ನಡೆದಿದೆ. ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ವಿಕ್ಟೋರಿಯಾಗೆ ಬಂದಿದ್ದರು. ಆದರೆ, ಕೋವಿಡ್ ಲಕ್ಷಣಗಳಿಲ್ಲದ ಕಾರಣ ಚಿಕಿತ್ಸೆಗೆ ದಾಖಲಿಸಿಕೊಳ್ಳುವುದು ವಿಳಂಬವಾಗಿತ್ತು. ಅಷ್ಟರಲ್ಲಿ ಆಸ್ಪತ್ರೆ ಗೇಟ್ ಮುಂದೆಯೇ ಪ್ರಾಣ ಬಿಟ್ಟಿದ್ದಾರೆ.

ರಸ್ತೆಯಲ್ಲೇ ಮೃತಪಟ್ಟ ವೃದ್ಧ: ಅರಕೆರೆಯ ನಿವಾಸಿಯೊಬ್ಬರು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯವರು 78 ವರ್ಷದ ವೃದ್ಧನನ್ನು ದಾಖಲಿಸಿಕೊಳ್ಳದೆ, ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಪಡೆದು ವಾಪಸ್ ಕಳುಹಿಸಿದ್ದಾರೆ.ಆ ವ್ಯಕ್ತಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ವೃದಟಛಿ ಮೃತ ಪಟ್ಟ ನಂತರ ಸೋಂಕಿರುವುದು ದೃಢಪಟ್ಟಿದೆ.

ಸಾವಲ್ಲೂ ಒಂದಾದ ದಂಪತಿ: ಜೆ.ಸಿ. ನಗರ, ಕುರುಬರಹಳ್ಳಿಯಲ್ಲಿ 75 ವರ್ಷದ ವೃದ್ಧ ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಅವರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಪತಿ ಸಾವಿನ ನಂತರ 20 ನಿಮಿಷಗಳಲ್ಲಿ ಪತ್ನಿಯೂ ಸಾವಿಗೀಡಾಗಿದ್ದಾರೆ. 5 ದಶಕ ಒಟ್ಟಿಗೇ ಜೀವನ ನಡೆಸಿದ್ದ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net