ಎನ್‌ಎಚ್‌ಎಂ ನೌಕರರಿಂದ ಸರ್ಕಾರಕ್ಕೆ ಪ್ರತಿಭಟನೆ ಎಚ್ಚರಿಕೆ

NHM
Published on

ಬೆಂಗಳೂರು: ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಪತ್ರ ಬರೆದಿದೆ.

ಸರ್ಕಾರವು ಎನ್‌ಎಚ್‌ಎಂ ನೌಕರರಿಗೆ 2023ರ ಏಪ್ರಿಲ್ ತಿಂಗಳಿಂದ ಶೇ. 15 ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯೂ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯ ಇಲಾಖೆಗೆ ಅನುದಾನವನ್ನು ಬಿಡುಗಡೆಗೊಳಿಸಿದೆ. ಆದರೆ, ಈವರೆಗೂ ಅನುದಾನವನ್ನು ಇಲಾಖೆ ಹಾಗೂ ಎನ್‌ಎಚ್‌ಎಂ ಜಿಲ್ಲೆಗಳಿಗೆ ಬಿಡುಗಡೆ ಮಾಡಿಲ್ಲ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಆಗ್ರಹಿಸಿದ್ದಾರೆ.

ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ನೌಕರರನ್ನಾಗಿ ನೇಮಕ ಮಾಡಿಕೊಳ್ಳುವುದು, ವೈದ್ಯಕೀಯ ವಿಮೆ ಜಾರಿ ಸೇರಿ ವಿವಿಧ ಬೇಡೆಕೆಗಳನ್ನು ಈಡೇರಿಸಬೇಕು.ಕೇಂದ್ರ ಸರ್ಕಾರದಿಂದ ಎನ್‌ಎಚ್‌ಎಂ ನೌಕರರ ಕ್ಷೇಮಾಭಿವೃದ್ಧಿಗೆ ಪ್ರತಿ ವರ್ಷ 7 ಕೋಟಿ ಅನುದಾನ ಬಿಡುಗಡೆಯಾಗುತ್ತಿದೆ. ಈ ಯೋಜನೆಗೂ ಸಹ ಯಾವುದೇ ನೀತಿ ನಿಯಮಗಳನ್ನು ರೂಪಿಸದೆ ಅನುದಾನವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಈ ರೀತಿಯ ವಿಳಂಬ ಧೋರಣೆ ಮಾಡುವ ಮೂಲಕ ನೌಕರರನ್ನು ಇಲಾಖೆ ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net