ಮದುವೆಯಾದ ಹತ್ತೇ ದಿನದಲ್ಲಿ ಹಬ್ಬದ ದಿವಸದಂದೇ ದುರಂತ ಸಾವಿಗೀಡಾದ ನವದಂಪತಿ..!

Couple 1
Published on

ತಿರುವನಂತಪುರಂ: ಜೀವನದಲ್ಲಿ ಸಾಕಷ್ಟು ಆಸೆ-ಆಕಾಂಕ್ಷೆಗಳನ್ನಿಟ್ಟುಕೊಂಡು ವೈವಾಹಿಕ ಜೀವನ ಪ್ರವೇಶಿಸಿದ್ದ ನವಜೋಡಿ ಮದುವೆಯಾದ ಕೇವಲ ಹತ್ತು ದಿನದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಶನಿವಾರ ಬೆಳಗ್ಗೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಪಶ್ಚಿಮ ಕನ್ನಮಂಗಳಂದ ಸಲಾಹುದೀನ್ (25)​ ಹಾಗೂ ಚೆಲೆಂಬ್ರದ ಫಾತಿಮಾ ಜಮುನಾ (19) ಮೃತ ನವದಂಪತಿ. ಇಬ್ಬರು ಮಲಪ್ಪುರಂನಲ್ಲೇ ವಾಸವಿದ್ದರು. ಶನಿವಾರ ಬೆಳಗ್ಗೆ ದಂಪತಿ ಬೈಕ್​ನಲ್ಲಿ ಪ್ರಯಾಣಿಸುವಾಗ ಚೆಲೆಂಬ್ರ ಪಂಚಾಯಿತಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ನವದಂಪತಿ ರಾಯಲ್​ ಎನ್​ಫೀಲ್ಡ್​ ಬೈಕನ್ನೇರಿ ಸಂಬಂಧಿಕರ ಮನೆಗೆ ಭೇಟಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಚೆಲೆಂಬ್ರ ಪಂಚಾಯಿತಿ ಬಳಿ ಬರುತ್ತಿದ್ದಂತೆ ಮತ್ತೊಂದು ವಾಹನವನ್ನು ಓವರ್​ಟೇಕ್​ ಮಾಡಲು ಸಲಾಹುದೀನ್​ ಯತ್ನಿಸಿದ್ದಾರೆ. ಆದರೆ, ಬೈಕ್​ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಅಪ್ಪಳಿಸಿದೆ. ಈ ವೇಳೆ ಎದುರುಗಡೆ ಬರುತ್ತಿದ್ದ ಲಾರಿಯ ಕೆಳಗೆ ಇಬ್ಬರು ಸಿಲುಕಿ, ಗಂಭೀರ ಗಾಯಗೊಂಡಿದ್ದರು.

ತೀವ್ರ ರಕ್ತಸ್ರಾವವಾಗಿ ಸಲಾಹುದೀನ್​ ಸ್ಥಳದಲ್ಲೇ ಮೃತಪಟ್ಟರೆ, ಫಾತಿಮಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದರು. ಇಬ್ಬರ ಶವವನ್ನ ಕೋಯಿಕ್ಕೋಡ್ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತೆನ್ಹಿಪಾಲಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ಕೋಯಿಕ್ಕೋಡ್​ನ ಫೆರೊಕೆ ಪೆತ್ತಾದಲ್ಲಿರುವ ಫಾತಿಮಾ ಅವರ ಸಂಬಂಧಿಕರ ಮನೆಗೆ ಭೇಟಿ ನೀಡಿ ದಂಪತಿ ಹಿಂದಿರುಗುವಾಗ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net