

ವೆಲ್ಲಿಂಗ್ಟನ್: ಎರಡು ತಿಂಗಳ ಹಿಂದೆಯೇ ಈ ದೇಶ ತನ್ನನ್ನು ತಾನು ಕರೊನಾಮುಕ್ತ ದೇಶವೆಂದು ಘೋಷಿಸಿಕೊಂಡಿತ್ತು. ಜತೆಗೆ ಕೆಲ ಆಫ್ರಿಕಾ ಖಂಡದ ದೇಶಗಳು ಇದೇ ರೀತಿ ಹೇಳಿಕೆ ನಿಡಿದ್ದವು. ಹೀಗಾಗಿ ಎಲ್ಲರೂ ಅನುಮಾನದ ದೃಷ್ಟಿಯಿಂದಲೇ ನೋಡಿದ್ದರು. ಆದರೆ, ಈಗಿನ ಬೆಳವಣಿಗೆಯಿಂದ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ನ್ಯೂಜಿಲೆಂಡ್.
ಕಳೆದ ನೂರು ದಿನಗಳಿಂದ ಇಡೀ ದೇಶದಲ್ಲಿ ಒಂದು ಹೊಸ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ನ್ಯೂಜಿಲೆಂಡ್ ಸಂಪೂರ್ಣ ಕರೊನಾಮುಕ್ತ ದೇಶವಾಗಿದೆ. ಭಾರತ ಸೇರಿ ಹಲವು ರಾಷ್ಟ್ರಗಳು ಕರೊನಾ ಸಂಕಷ್ಟದಿಂದ ಇನ್ನಿಲ್ಲದಂತೆ ನಲುಗುತ್ತಿದ್ದರೆ, ನ್ಯೂಜಿಲೆಂಡ್ನ ಸಾಧನೆ ನಿಬ್ಬೆರಗಾಗಿಸಿದೆ.
ಆದರೆ, ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ ಎಕೆಂದರೆ, ಕರೊನಾ ನಿಗ್ರಹಿಸಿದ್ದ ವಿಯಟ್ನಾಮ್ ಹಾಗೂ ಆಸ್ಟ್ರೇಲಿಯಾದಲ್ಲಿ ಮತ್ತೆ ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಎಚ್ಚರಿಕೆಯಿಂದ ಇರಲೇಬೇಕು ಎಂದು ತಜ್ಞರು ಹೇಳಿದ್ದಾರೆ.
ಸದ್ಯ, ಒಂದೂ ಕರೊನಾ ಪ್ರಕರಣಗಳಿಲ್ಲದೇ ನ್ಯೂಜಿಲೆಂಡ್ ಜಗತ್ತಿನ ಅತ್ಯಂತ ಸುರಕ್ಷಿತ ಪ್ರದೇಶವೆನಿಸಿಕೊಂಡಿದೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ಈ ರಾಷ್ಟ್ರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಆದರೆ, ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿರುವುದು, ಸೋಂಕಿನ ಮೇಲೆ ನಿಗಾವಹಿಸುವ ಆ್ಯಪ್ಗಳನ್ನು ಬಳಸದಿರುವುದು, ಸ್ವಚ್ಛತೆಯನ್ನು ಕಡೆಗಣಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಒಮ್ಮೆ ನಿಯಂತ್ರಣಕ್ಕೆ ಬಂದ ಕರೊನಾ ಸೋಂಕು ಅದೆಷ್ಟು ವೇಗದಲ್ಲಿ ಮರುಕಳಿಸಬಹುದು ಎಂಬುದನ್ನು ಇತರೆಡೆಗಳಲ್ಲಿ ನೋಡಿದ್ದೇವೆ. ಹೀಗಾಗಿ ಸಮಾಧಾನಪಟ್ಟುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಮಹಾನಿರ್ದೇಶಕ ಡಾ.ಆ್ಯಶ್ಲೇ ಬ್ಲೂಮ್ ಫೀಲ್ಡ್.
ನ್ಯೂಜಿಲೆಂಡ್ನಲ್ಲಿ ಒಟ್ಟಾರೆ ಸೋಂಕಿಗೆ ಒಳಗಾದವರು 1,569 ಜನರಷ್ಟೇ. ಸದ್ಯ ವಿದೇಶ ಅಥವಾ ಬೇರೆಎಡಗಲಿಂದ ಬಂದು ಸೋಂಕಿಗೆ ಒಳಗಾದ 21 ಜನರನ್ನು ವಿವಿಧೆಡೆ ನಿಗಾದಲ್ಲಿ ಇಡಲಾಗಿದೆ. ಸ್ಥಳೀಯವಾಗಿ ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಾಧನೆಗಾಗಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆಡ್ರೆನ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.