

ನವದೆಹಲಿ: ಅಮೆರಿಕದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ಒಂದು ಲಕ್ಷವನ್ನೂ ಮೀರಿದೆ. ಈ ಸಂದರ್ಭದಲ್ಲಿ ‘ದಿ ನ್ಯೂಯಾರ್ಕ್ ಟೈಮ್್ಸ’ ಭಾನುವಾರದ (ಮೇ. 24) ಸಂಚಿಕೆಯ ಮುಖಪುಟದಲ್ಲಿ ಒಂದು ಸಾವಿರ ಜನರ ಹೆಸರನ್ನು ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸಿದೆ.
ಮುದ್ರಿತ ಆವೃತ್ತಿಯಲ್ಲಿ ಹೆಸರುಗಳನ್ನಷ್ಟೇ ಪ್ರಕಟಿಸಿದ್ದರೆ, ಅಂತರ್ಜಾಲ ಆವೃತ್ತಿಯಲ್ಲಿ ದೃಶ್ಯೀಕರಣದ ಮೂಲಕ ಒಂದು ವಾಕ್ಯದಲ್ಲಿ ಕೆಲವರ ವ್ಯಕ್ತಿತ್ವವನ್ನೂ ಹೇಳಿದೆ. ಉದಾ: ‘ರುತ್ ಸ್ಕಾಪಿನೋಕ್, ರೋಸ್ವಿಲ್ಲೆ 85, ಕ್ಯಾಲಿಫೋರ್ನಿಯ - ಹಿತ್ತಿಲಿನ ಹಕ್ಕಿಗಳು ಇವಳ ಅಂಗೈಯಿಂದ ಕಾಳು ಹೆಕ್ಕಿ ತಿನ್ನುತ್ತಿದ್ದವು.’
ನ್ಯೂಯಾರ್ಕ್ ಟೈಮ್್ಸ 269 ಸ್ಥಳೀಯ ಪತ್ರಿಕೆಗಳಿಂದ ಈ ಮಾಹಿತಿಗಳನ್ನು ಆಯ್ದು ತಿದ್ದಿ ಪ್ರಕಟಿಸಿದೆ. ‘ಚಿತ್ರಗಳಿಲ್ಲದೆ ಕೇವಲ ಪಠ್ಯದಿಂದಲೇ ಮುಖಪುಟ ಪ್ರಕಟಿಸಿದ್ದು 40 ವರ್ಷಗಳಲ್ಲಿ ಇದೇ ಮೊದಲು’ ಎನ್ನುತ್ತಾರೆ ಪತ್ರಿಕೆಯ ಮುಖ್ಯ ವಿನ್ಯಾಸಕ ಬೋಡ್ಕಿನ್.