ಹೊಸ ವರ್ಷ ಆಚರಣೆಯ ಮಾರ್ಗಸೂಚಿ ಬಗ್ಗೆ ಗೃಹ ಸಚಿವ ಹೇಳಿದ್ದೇನು?

bommayi
Published on

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಕರೊನಾ ಛಾಯೆ ಆವರಿಸಿದ್ದು, ಮೋಜು-ಮಸ್ತಿಯ ಪಾರ್ಟಿ ಗುಂಗಲ್ಲಿ ಇದ್ದವರಿಗೆ ಬ್ರೇಕ್​ ಬೀಳಲಿದೆ.

ರೂಪಾಂತರಿ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಮೋಜಿನ ಕೂಟ ನಿಷೇಧಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ನಗರ ಹೊರವಲಯ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಈ ನಿರ್ಬಂಧ ಅನ್ವಯವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿರಿ ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹೊಸ ವರ್ಷ ಆಚರಣೆ ಕುರಿತ ಮಾರ್ಗಸೂಚಿ ಸೋಮವಾರ ಪ್ರಕಟವಾಗಲಿದೆ. ಹೊಸ ವರ್ಷ ಸಂಭ್ರಮಾಚರಣೆಗಾಗಿ ನಡೆಸುವ ಪಾರ್ಟಿಗಳಲ್ಲಿ ಜನದಟ್ಟಣೆ ಇರಲಿದೆ. ಹಾಗಾಗಿ ಕರೊನಾ ಸೋಂಕು ಹರಡುವ ಅಪಾಯ ಹೆಚ್ಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂತಹ ಪಾರ್ಟಿಗಳನ್ನು ನಿಷೇಧಿಸಲಾಗುತ್ತಿದೆ ಎಂದರು.

ಪಬ್, ಕ್ಲಬ್, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಲ್ಲಿ ನಿಯಮಗಳ ಪ್ರಕಾರ ಜನರ ಪ್ರವೇಶಕ್ಕೆ ಅವಕಾಶ, ನಿಗದಿತ ಅವಧಿ ಪಾಲನೆ ಕಡ್ಡಾಯ. ಆದರೆ ಡಿ.ಜೆ.ಸೌಂಡ್ ಹಾಕಿಕೊಂಡು ಗುಂಪು ನರ್ತನದಂತಹ ಚಟುವಟಿಕೆಗಳು ನಿಷಿದ್ಧವೆಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಎಲ್ಲರೂ ಪತ್ತೆ: ಬ್ರಿಟನ್​ನಿಂದ ರಾಜ್ಯಕ್ಕೆ ಬಂದಿರುವ ಎಲ್ಲರೂ ಪತ್ತೆಯಾಗಿದ್ದಾರೆ. ವಿಳಾಸಗಳನ್ನು ಸಂಗ್ರಹಿಸಿದ ಬಳಿಕ ಮೊಬೈಲ್ ಮೂಲಕ ಸಂಪರ್ಕಿಸಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಯು.ಕೆ.ಯಿಂದ ಮೊದಲ ಹಂತದಲ್ಲಿ ರಾಜ್ಯಕ್ಕೆ ಬಂದವರಿಗೆ ಹೊಸ ರೂಪದ ಕರೊನಾ ವೈರಾಣು ಬಗ್ಗೆ ಮಾಹಿತಿಯಿಲ್ಲದೆ ಎಲ್ಲೆಡೆ ಓಡಾಡಿದ್ದಾರೆ. ಎಲ್ಲರ ವಿವರ ಕಲೆಹಾಕಿದ ನಂತರ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಬೇಕೆಂಬ ಸಲಹೆ ನೀಡಲಾಗಿದೆ ಎಂದು ಹೇಳಿದರು.

1,214 ಸೋಂಕಿತರು ಗುಣಮುಖ: ರಾಜ್ಯದಲ್ಲಿ ಭಾನುವಾರ 1,214 ಜನರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದರೆ. ಹೊಸದಾಗಿ 911 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿವರೆಗೆ ಒಟ್ಟು 9.16 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದ್ದು, 8.91 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳು ಹಾಗೂ ಹೋಂ ಕ್ವಾರಂಟೈನ್​ನಲ್ಲಿ 13,080 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net