

ರೋಮ್: ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಮನುಷ್ಯರ ಹೊಸ ವರ್ಷಾಚರಣೆಯ ಅಬ್ಬರವು ನೂರಾರು ಪಕ್ಷಿಗಳನ್ನು ಬಲಿ ತೆಗೆದುಕೊಂಡ ದಾರುಣ ಘಟನೆ ಇಟಲಿಯಲ್ಲಿ ನಡೆದಿದೆ.
ಇಟಲಿಯ ರಾಜಧಾನಿ ರೋಮ್ ನಗರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಹಲವಾರು ಜನರು ಅತಿರೇಕವಾಗಿ ಪಟಾಕಿ ಮತ್ತು ಸಿಡಿಮದ್ದುಗಳನ್ನು ಹಾರಿಸಿದ ಪರಿಣಾಮ ನೂರಾರು ಪಕ್ಷಿಗಳು ಸಾವನ್ನಪ್ಪಿವೆ ಎಂದು ಪ್ರಾಣಿ ಹಕ್ಕು ಸಂಘಟನೆಗಳು ಶುಕ್ರವಾರ ಆರೋಪಿಸಿವೆ. ರೋಮ್ ನಗರದ ಮುಖ್ಯ ರೈಲ್ವೆ ನಿಲ್ದಾಣದ ಬಳಿಯ ರಸ್ತೆಗಳ ವಿಡಿಯೋ ತುಣುಕುಗಳಲ್ಲಿ ಡಜನ್ಗಟ್ಟಲೆ ಹಕ್ಕಿಗಳು ಸತ್ತು ಬಿದ್ದಿರುವ ದೃಶ್ಯಗಳು ಕಂಡುಬಂದಿದೆ. ಇದನ್ನೂ ಓದಿರಿ ವರ್ಷಾಚರಣೆಗೆ ಕೇಕ್ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ
ಸತ್ತಿರುವ ಪಕ್ಷಿಗಳಲ್ಲಿ ಮೈನಾ ಹಕ್ಕಿಗಳೇ ಹೆಚ್ಚು. ಈ ಹಕ್ಕಿಗಳ ಸಾವಿನ ಕಾರಣ ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಅತಿಯಾದ ಶಬ್ದ ಮಾಡುವ ಪಟಾಕಿ ಮತ್ತು ಸಿಡಿಮದ್ದುಗಳನ್ನು ಹಾರಿಸಿದ್ದೇ ಹಕ್ಕಿಗಳ ಪ್ರಾಣಕ್ಕೆ ಕುತ್ತು ತಂದಿದೆ ಎಂದು ಅಂತಾರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಸಂಘಟನೆ (ಐಒಪಿಎ) ಅಭಿಪ್ರಾಯಪಟ್ಟಿದೆ.
ಹಸಿರುಗಿಡಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಮೈನಾ ಹಕ್ಕಿಗಳು ಮತ್ತು ಇತರ ಸಣ್ಣ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿವೆ.
"ಹಕ್ಕಿಗಳು ಭಯದಿಂದ ಸತ್ತಿರುವ ಸಾಧ್ಯತೆ ಇದೆ. ಒಟ್ಟಿಗೆ ಮೇಲೆ ಹಾರಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಳ್ಳಬಹುದು. ಕಿಟಕಿಗಳಿಗೆ, ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದಿರಬಹುದು. ಹಕ್ಕಿಗಳು ಹೃದಯಾಘಾತದಿಂದಲೂ ಸಾಯಬಹುದು ಎಂಬುದನ್ನೂ ಮರೆಯುವಂತಿಲ್ಲ" ಎಂದು ಸಂಘಟನೆಯ ವಕ್ತಾರರಾದ ಲೋರೆಡಾನಾ ಡಿಗ್ಲಿಯೋ ಹೇಳಿದ್ದಾರೆ. ಇದನ್ನೂ ಓದಿರಿ ಗ್ರಾಮ ಪಂಚಾಯಿತಿ ರಾಜಕೀಯಕ್ಕೆ 4 ವರ್ಷದ ಮಗು ಬಲಿ?
ಪ್ರತಿವರ್ಷ ಪಟಾಕಿಗಳ ಪ್ರದರ್ಶನದ ಅಬ್ಬರದಿಂದಾಗಿ ಕಾಡುಪ್ರಾಣಿಗಳು ಮತ್ತು ಸಾಕುಪ್ರಾಣಿಗಳು ತೊಂದರೆಗೀಡಾಗುತ್ತವೆ, ಗಾಯಗೊಳ್ಳುತ್ತವೆ ಎಂದೂ ಲೋರೆಡಾನಾ ತಿಳಿಸಿದ್ದಾರೆ.
ರೋಮ್ ನಗರ ಆಡಳಿತವು ವೈಯಕ್ತಿಕವಾಗಿ ಪಟಾಕಿ ಹಚ್ಚುವುದು, ಪ್ರದರ್ಶಿಸುವುದನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೆ, ಈ ಬಾರಿ ಕರೊನಾ ಕಾರಣಕ್ಕಾಗಿ ಡಿಸೆಂಬರ್ 31 ರ ರಾತ್ರಿ 10 ಗಂಟೆಯ ಮೇಲೆ ಕರ್ಫ್ಯೂ ಕೂಡ ವಿಧಿಸಲಾಗಿತ್ತು. ಆದಾಗ್ಯೂ ಈ ರೀತಿ ಗುಂಪುಗುಂಪಾಗಿ ಹಕ್ಕಿಗಳು ಸತ್ತಿರುವ ಘಟನೆ ವರದಿಯಾಗಿದೆ.
ಅಂತಾರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಸಂಘಟನೆಯ ಇಟಲಿ ವಿಭಾಗವು ವೈಯಕ್ತಿಕ ಬಳಕೆಗೆ ಪಟಾಕಿ ಮತ್ತು ಸಿಡಿಮದ್ದುಗಳನ್ನು ಮಾರುವುದನ್ನು ನಿಷೇಧಿಸಬೇಕಾಗಿ ಒತ್ತಾಯಿಸಿದೆ.