ಸಂಪಾದಕೀಯ | ಹೊಸ ಬಗೆಯ ಭಯೋತ್ಪಾದನೆ

ವಿಜಯವಾಣಿ (3)
Published on

ಭಯೋತ್ಪಾದಕರಿಗೆ ತರಬೇತಿ, ಉಗ್ರರ ನುಸುಳುವಿಕೆ, ವಿಧ್ವಂಸಕಾರಿ ಕೃತ್ಯಗಳಿಗೆ ಪ್ರಚೋದನೆ, ಭಾರತವಿರೋಧಿ ಚಟುವಟಿಕೆ, ಉಗ್ರಜಾಲಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಹಣಕಾಸಿನ ನೆರವು ಇದೆಲ್ಲವೂ ಕಳೆದ ಹಲವು ದಶಕಗಳಿಂದ ಪಾಕಿಸ್ತಾನ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಕುಕೃತ್ಯಗಳು. ಪಾಕಿಸ್ತಾನದ ಪಾಪಕಾರ್ಯಗಳನ್ನೆಲ್ಲ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲೇ ತೀವ್ರವಾಗಿ ಖಂಡಿಸಿದೆ, ಆ ಮೂಲಕ ಪಾಕ್​ನ ಮುಖವಾಡವನ್ನು ಕಿತ್ತೆಸೆದಿದೆ. ಆದರೂ, ಭಾರತಕ್ಕೆ ಹಾನಿ ಮಾಡಲು ಸದಾ ಒಂದಿಲ್ಲೊಂದು ದಾರಿ ಹುಡುಕುವ ಪಾಕ್ ಈಗ ಗಡಿಯಲ್ಲಿ ಹೊಸ ಬಗೆಯ ಭಯೋತ್ಪಾದನೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ.

ಭಾರತದೊಳಕ್ಕೆ ಪಾಕಿಸ್ತಾನದ ಮೂಲಕ ಡ್ರೋನ್​ಗಳಲ್ಲಿ ಮಾದಕದ್ರವ್ಯ ಸಾಗಣೆ ಮಾಡುವ ಪ್ರಕರಣಗಳು ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಾಗತೊಡಗಿವೆ. ಜಮ್ಮುವಿನ ಅರ್ನಿಯಾದಲ್ಲಿ ಇಂಥ ಪ್ರಕರಣವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್) ಶನಿವಾರ ವಿಫಲಗೊಳಿಸಿದ್ದು, ಡ್ರೋನ್​ನಿಂದ 495 ಗ್ರಾಂ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆದರೆ, ರಾಷ್ಟ್ರಘಾತಕ ಶಕ್ತಿಗಳ ಇಂಥ ಕೃತ್ಯಗಳು ಈಗಾಗಲೇ ಮಾದಕದ್ರವ್ಯಗಳ ಜಾಲದಲ್ಲಿ ಸಿಲುಕಿರುವ ಪಂಜಾಬ್ ಮತ್ತಿತರ ಗಡಿ ರಾಜ್ಯಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆಯಲ್ಲದೆ ದೇಶದ ಭದ್ರತೆಗೂ ಸಮಸ್ಯೆ ತಂದೊಡ್ಡಿದೆ. ಕೆಲವು ಡ್ರೋನ್​ಗಳು ಅಫ್ಘಾನಿಸ್ತಾನದಲ್ಲಿ ಬೆಳೆದ ಅಫೀಮು, ಹೆರಾಯಿನ್ ತಂದು ಹಾಕಿದರೆ, ಇನ್ನು ಕೆಲವು ಡ್ರೋನ್​ಗಳು ಚೀನಾನಿರ್ವಿುತ ಪಿಸ್ತೂಲು, ರೈಫಲ್​ಗಳನ್ನು ತಂದು ಎಸೆಯುತ್ತಿವೆ.

8 ಅಡಿ ಅಗಲವಿರುವ, ಹೈ ರೆಸೊಲ್ಯೂಷನ್ ಕ್ಯಾಮರಾಗಳನ್ನು ಹೊಂದಿರುವ ಈ ಡ್ರೋನ್​ಗಳು ಭಾರತದೊಳಕ್ಕೆ ಸುಮಾರು 10-12 ಕಿಮೀ ದೂರ ಬರುತ್ತಿವೆ. ಮಾದಕದ್ರವ್ಯಗಳು ಯುವಜನರ ಕೈಗೆ ಸಿಗುವಂತಾಗಿ ಅವರು ದಾರಿತಪ್ಪಬೇಕು, ಆ ಮೂಲಕ ಯುವಭಾರತವನ್ನು ಬಲಹೀನಗೊಳಿಸಬೇಕು ಎಂಬ ಷಡ್ಯಂತ್ರ ಇದರ ಹಿಂದಿರುವುದು ರಹಸ್ಯವಾಗಿ ಉಳಿದಿಲ್ಲ. ಭಾರತದ ವಿರುದ್ಧ ಯುದ್ಧ ಮಾಡಿ ಗೆಲ್ಲಲಾಗದ ಪಾಕಿಸ್ತಾನ ಉಗ್ರವಾದವನ್ನು ರಫ್ತು ಮಾಡಿತು. ಕೇಂದ್ರ ಸರ್ಕಾರ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಂತೆ ಈಗ ಹೊಸ ರೀತಿಯ ಭಯೋತ್ಪಾದನೆಯಲ್ಲಿ ಶತ್ರುರಾಷ್ಟ್ರ ತೊಡಗಿದೆ.

ಡ್ರೋನ್​ನಿಂದ ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಸಾಗಣೆ ತಡೆಯಲು ತಂತ್ರಜ್ಞಾನದ ಬಳಕೆ ಹೆಚ್ಚಬೇಕು. ಈ ಆತಂಕವನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದರತ್ತ ರಕ್ಷಣಾ ಇಲಾಖೆ ಆದ್ಯ ಗಮನ ನೀಡಬೇಕಾಗಿದೆ ಮತ್ತು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಣಾಮಕಾರಿಯಾಗಿ ಹೋರಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net