

ಶೃಂಗೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಾರಿಗೆ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಾಹನ ಮಾಲಿಕರು, ಚಾಲಕರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಬಸ್ ನಿಲ್ದಾಣದಿಂದ ಭಾರತೀಬೀದಿ ಮೂಲಕ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಚಾಲಕರ ಸಂಘದ ಅಕ್ಬರ್ ಆಲಿ ಮಾತನಾಡಿ, ಅಪಘಾತ ಸಂಭವಿಸಿದಾಗ ಘಟನಾ ಸ್ಥಳದಲ್ಲಿ ನಾವಿದ್ದರೆ ಆಕ್ರೋಶಿತ ಜನರು ಚಾಲಕರನ್ನು ಥಳಿಸುವ ಅಪಾಯವಿರುತ್ತದೆ. ಈ ಆತಂಕದಿಂದ ತಪ್ಪಿಸಿಕೊಂಡರೂ ನಂತರ ಹೊಸ ಕಾನೂನಿನಂತೆ 10 ವರ್ಷದವರೆಗೂ ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ. ಇದರಿಂದ ನಮ್ಮ ಬದುಕೇ ಅತಂತ್ರವಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಹೊಸ ಕಾನೂನು ಹಿಂಪಡೆದು, ಚಾಲಕರ ರಕ್ಷಣೆಗೆ ಮುಂದಾಗಬೇಕು ಎಂದರು.
ತಹಸೀಲ್ದಾರ್ ಗೌರಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಚಾಲಕರಾದ ರಾಘವೇಂದ್ರ, ರಿಯಾಜ್, ಕುಮಾರ, ನಾಗೇಶ್, ನವೀನ, ಪ್ರಭಾಕರ, ಕಲಂದರ್, ರವಿ, ಸುಬ್ಬಣ್ಣ ಮತ್ತಿತರರಿದ್ದರು.