

ನವದೆಹಲಿ: ಫಾಸ್ಟ್ಟ್ಯಾಗ್ ಬಳಕೆದಾರರು ವಾಹನದ ವೆರಿಫಿಕೇಶನ್ ಪೂರ್ಣಗೊಳಿಸದಿದ್ದರೂ ಯಾವುದೇ ಅಡಚಣೆಯನ್ನು ಎದುರಿಸದಂತೆ ‘ನೋ ಯುವರ್ ವೆಹಿಕಲ್ (ಕೆವೈವಿ)’ ಪ್ರಕ್ರಿಯೆಯನ್ನು ಸರಳ ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಆದೇಶ ಹೊರಡಿಸಿದೆ. ಪರಿಷ್ಕೃತ ನಿಯಮಗಳನ್ನು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (ಐಎಚ್ಎಂಸಿಎಲ್) ಪ್ರಕಟಿಸಿದೆ.
‘ಕೆವೈವಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಿಮ್ಮ ವಾಹನದ ಫಾಸ್ಟ್ಟ್ಯಾಗ್ ಕೆಲಸ ಮಾಡುವುದಿಲ್ಲ’ ಎಂದು ಈ ಮೊದಲು ತಿಳಿಸಲಾಗಿತ್ತು. ಪರಿಷ್ಕತ ನಿಯಮಗಳ ಪ್ರಕಾರ, ಕೆವೈವಿ ಪ್ರಕ್ರಿಯೆ ಬಾಕಿ ಇದ್ದರೂ ಫಾಸ್ಟ್ಯಾಗ್ ಸಕ್ರಿಯವಾಗಿರುತ್ತದೆ. ವೆಹಿಕಲ್ ವೆರಿಫಿಕೇಶನ್ ಪೂರ್ಣಗೊಳಿಸಲು ಬಳಕೆದಾರರಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ. ವಾಹನಗಳ ಮುಂಭಾಗ, ಹಿಂಭಾಗ ಮತ್ತು ಅಕ್ಕ-ಪಕ್ಕದ ಫೋಟೋ ತೆಗೆದು ಅಪ್ಲೋಡ್ ಮಾಡಬೇಕೆಂದು ಈ ಮುನ್ನ ತಿಳಿಸಲಾಗಿತ್ತು. ಆ ನಿಯಮವನ್ನು ಈಗ ಸಡಿಲಿಸಲಾಗಿದೆ. ಕಾರು, ಜೀಪ್, ವ್ಯಾನ್ ಮುಂತಾದವುಗಳ ನಂಬರ್ ಪ್ಲೇಟ್ ಮತ್ತು ಫಾಸ್ಟ್ಯಾಗ್ ಸ್ಪಷ್ಟವಾಗಿ ಕಾಣುವ ಮುಂಭಾಗದ ಒಂದೇ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಸಾಕು.
ವಾಹನದ ವೆರಿಫಿಕೇಶನ್ ಪ್ರಕ್ರಿಯೆಯನ್ನು ರಾಷ್ಟ್ರೀಯ ಡೇಟಾಬೇಸ್ ‘ವಾಹನ್’ ಜತೆ ಸಂಯೋಜನೆ ಮಾಡಲಾಗಿದೆ. ಬಳಕೆದಾರರು ವಾಹನ ಸಂಖ್ಯೆ, ಚಾಸಿಸ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿದರೆ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್ಸಿ) ವಿವರಗಳನ್ನು ಪಡೆಯುತ್ತದೆ. ಒಂದೇ ಮೊಬೈಲ್ ಸಂಖ್ಯೆಗೆ ಹೆಚ್ಚು ವಾಹನಗಳು ಲಿಂಕ್ ಆಗಿದ್ದರೆ, ಬಳಕೆದಾರರು ಕೆವೈವಿ ಪೂರ್ಣಗೊಳಿಸಲು ನಿರ್ದಿಷ್ಟ ವಾಹನ ಆಯ್ಕೆ ಮಾಡಬಹುದು. ಕೆವೈವಿ ನೀತಿ ಜಾರಿಗೆ ಬರುವ ಮೊದಲು ನೀಡಲಾದ ಫಾಸ್ಟ್ಟ್ಯಾಗ್ಗಳು ಎಂದಿನಂತೆ ಕೆಲಸ ಮಾಡುತ್ತಿರುತ್ತವೆ. ದುರ್ಬಳಕೆ ಅಥವಾ ಲೂಸ್ ಟ್ಯಾಗ್ಗಳ ಬಗ್ಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ. ಕೆವೈವಿ ಬಾಕಿ ಇದ್ದರೆ, ಬಳಕೆದಾರರಿಗೆ ಫಾಸ್ಟ್ಟ್ಯಾಗ್ ನೀಡಿದ ಬ್ಯಾಂಕ್ನಿಂದ ಎಸ್ಎಂಎಸ್ ಬರುತ್ತವೆ.
ಫಾಸ್ಟ್ಟ್ಯಾಗ್ ಅನ್ನು ನಿರ್ದಿಷ್ಟ ವಾಹನಕ್ಕೆ ಮತ್ತು ನಿರ್ದಿಷ್ಟ ವಾಹನ ಸಂಖ್ಯೆಗೇ ನೀಡಲಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಮತ್ತು ಅದನ್ನು ವಾಹನದ ಮುಂಭಾಗದ ಗಾಜಿಗೆ (ವಿಂಡ್ಶೀಲ್ಡ್) ಹಿಂಬದಿಯಿಂದ ಅಂಟಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನೋ ಯುವರ್ ವೆಹಿಕಲ್ (ಕೆವೈವಿ) ನೀತಿಯನ್ನು ಪರಿಚಯಿಸಲಾಗಿದೆ. ಕೆವೈವಿ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ನಂತರ ಮತ್ತೆ ಹೊಸದಾಗಿ ಫೋಟೋಗಳನ್ನು ಅಪ್ಲೋಡ್ ಮಾಡಿ ಕೆವೈವಿ ಮಾಡಬೇಕಾಗುತ್ತದೆ. ಅಪ್ಲೋಡ್ ಮಾಡುವ ಫೋಟೋಗಳು ಸ್ಪಷ್ಟವಾಗಿರಬೇಕು. ಅವುಗಳನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಬ್ಯಾಂಕ್ನ ವಿವೇಚನೆಯ ಆಧಾರದ ಮೇಲೆ ಯಾವುದೇ ಅರ್ಜಿ ತಿರಸ್ಕೃತವಾದರೆ, ನಿಮ್ಮ ಫಾಸ್ಟ್ಟ್ಯಾಗ್ ಹಾಟ್ಲಿಸ್ಟ್ ಆಗುತ್ತದೆ. ಅಂದರೆ ನೀವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಟ್ಯಾಗ್ ಬಳಸಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಪ್ರಾಧಿಕಾರಗಳು ವಿಧಿಸುವ ದಂಡವನ್ನು ಪಾವತಿಸಬೇಕಾಗುತ್ತದೆ. ಅಂತಹ ಫಾಸ್ಟಾ್ಯಗ್ಅನ್ನು ಹಾಟ್ಲಿಸ್ಟ್ನಿಂದ ತೆಗೆದುಹಾಕಲು, ಸರಿಯಾದ ದಾಖಲೆಗಳನ್ನು ಮತ್ತೆ ಅಪ್ಲೋಡ್ ಮಾಡಬೇಕಾಗುತ್ತದೆ. ಬ್ಯಾಂಕ್ ಪರಿಶೀಲಿಸಿ ಅನುಮೋದಿಸಿದ ನಂತರ ಹಾಟ್ಲಿಸ್ಟ್ನಿಂದ ನಿಮ್ಮ ಫಾಸ್ಟಾ್ಯಗ್ಅನ್ನು ತೆಗೆಯಲಾಗುತ್ತದೆ.
ಕೆವೈವಿ ಬಗ್ಗೆ ದೂರು ಸಲ್ಲಿಸಲು ಅಥವಾ ಮಾರ್ಗದರ್ಶನ ಪಡೆಯಲು ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಗೆ ಚಾಲಕರು ಕರೆ ಮಾಡಬಹುದು.
ಫಾಸ್ಟ್ಟ್ಯಾಗ್ ಎಂಬುದು ವಾಹನದ ಮುಂಭಾಗದ ಗಾಜಿನ ಮೇಲೆ ಅಂಟಿಸಲಾಗುವ ಸಾಧನವಾಗಿದ್ದು, ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂಚಾಲಿತ ಟೋಲ್ ಪಾವತಿಯನ್ನು ಸಾಧ್ಯಗೊಳಿಸುವ ಸಾಧನವೇ ಫಾಸ್ಟ್ಯಾಗ್. ಅದನ್ನು ವಾಹನದ ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ಅದರಲ್ಲಿರುವ ಕ್ವಿಕ್ ರೆಸ್ಪಾನ್ಸ್ ಕೋಡ್ಅನ್ನು ಟೋಲ್ಪ್ಲಾಜಾದ ಕ್ಯಾಮೆರಾ ಸ್ಕ್ಯಾನ್ ಮಾಡಿ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿಕೊಂಡು ವಾಹನ ನಿರಾತಂಕವಾಗಿ ಮುಂದೆ ಹೋಗಲು ಅನುವು ಮಾಡಿಕೊಡುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಪ್ಲಾಜಾದಲ್ಲಿ ದಟ್ಟಣೆ ಆಗುವುದನ್ನು ತಪ್ಪಿಸಿದಂತಾಗುತ್ತದೆ. ನಗದು ಪಾವತಿಯ ಸಮಸ್ಯೆಯೂ ಇಲ್ಲದಂತಾಗುತ್ತದೆ.
ಯಾವುದಾದರೂ ಬಳಕೆದಾರರಿಗೆ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಅಥವಾ ಕೆವೈವಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟವೆನಿಸಿದರೆ ಬ್ಯಾಂಕ್ಗಳು ಸಹಾಯ ಮಾಡಬೇಕು ಎಂದು ಎನ್ಎಚ್ಎಐ ಸೂಚಿಸಿದೆ. ಫಾಸ್ಟಾ್ಯಗ್ ನೀಡುವ ಬ್ಯಾಂಕ್ಗಳು ಬಳಕೆದಾರರನ್ನು ಸ್ವಯಂ ಪ್ರೇರಿತವಾಗಿ ಸಂರ್ಪಸಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯ ಮಾಡಬೇಕು ಎಂದೂ ಅದು ತಿಳಿಸಿದೆ.