

Black Spot Onion: ದಿನನಿತ್ಯದ ಅಡುಗೆಗೆ ಅದರಲ್ಲೂ ಬಹುತೇಕ ತಿನಿಸುಗಳಿಗೆ ಈರುಳ್ಳಿ ಅತ್ಯವಶ್ಯಕ. ಇದಿಲ್ಲದೇ ಆ ತಿಂಡಿ, ಊಟಕ್ಕೆ ರುಚಿಯೇ ಇರುವುದಿಲ್ಲ. ಮತ್ತೊಂದು ರೀತಿ ಹೇಳುವುದಾದರೆ ಸ್ವಾದವೇ ಇಲ್ಲ. ಕತ್ತರಿಸಬೇಕಾದರೆ ಕಣ್ಣೀರು ತರಿಸುವ ಈರುಳ್ಳಿ, ಕೆಲವೊಮ್ಮೆ ಎಚ್ಚರ ತಪ್ಪಿದ್ರೆ ನೋವಿನ ಕಣ್ಣೀರಿಗೂ ಕಾರಣವಾಗಬಹುದು. ಹೌದು, ಈರುಳ್ಳಿ ಸಿಪ್ಪೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ಸಂಗತಿಗಳು ಇಲ್ಲಿವೆ ನೋಡಿ.
ಹೆಚ್ಚಾಗಿ ಚಳಿಗಾಲದಲ್ಲಿ ಅಥವಾ ತಣ್ಣನೆಯ ವಾತಾವರಣದಲ್ಲಿ ಈರುಳ್ಳಿಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ನೀವು ಗಮನಿಸಿದ್ದೀರಾ? ಅಸಲಿಗೆ ಇದು ಕೇವಲ ಕಲೆಯಲ್ಲ. ಇದೊಂದು ಶಿಲೀಂಧ್ರ (Fungus). ಇದು ದೇಹದೊಳಗೆ ಪ್ರವೇಶಿಸಿದರೆ ಅಲರ್ಜಿಯಂತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಸಂಗ್ರಹಿಸಿಡಲಾದ ಈರುಳ್ಳಿಯನ್ನು ಪರಿಶೀಲಿಸದೆ ತಿನ್ನುವುದು ಕೆಲವೊಮ್ಮೆ ಹಾನಿಕಾರಕ ಎಂಬುದು ನಿಮಗೆ ನೆನಪಿರಲಿ.
ಕಪ್ಪು ಕಲೆಗಳು ಕೇವಲ ಈರುಳ್ಳಿಯ ಮೇಲ್ಪದರದಲ್ಲಿ ಮಾತ್ರ ಕಾಣಿಸಿಕೊಂಡರೆ ನೀವದನ್ನು ಸುಲಿದು, ಒಳ ಭಾಗವನ್ನು ಉಪಯೋಗಿಸಬಹುದು. ಚುಕ್ಕೆಯಿರುವ ಸಿಪ್ಪೆಯ ಪದರವನ್ನು ತೆಗೆದ ಬಳಿಕ ಒಳಗಿನ ಬಿಳಿ ಭಾಗವು ಕಪ್ಪಾಗಿದ್ದರೆ, ಆ ಈರುಳ್ಳಿ ತಿನ್ನಲು ಯೋಗ್ಯವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ಅಂದರೆ, ಸಿಪ್ಪೆ ತೆಗೆದ ಬಳಿಕ ಈರುಳ್ಳಿ ಏನಾದರೂ ಕೊಳೆತ ಅಥವಾ ನೀರಿನಂಶದಿಂದ ಕೂಡಿದ್ದರೆ ಅದನ್ನು ಬಿಸಾಡಿ.
ಕಪ್ಪು ಕಲೆಗಳಿರುವ ಈರುಳ್ಳಿಯನ್ನು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು, ಮಕ್ಕಳು ಮತ್ತು ವೃದ್ಧರು ತಿನ್ನಬಾರದು. ಆಸ್ತಮಾ, ಕ್ಷಯ ಮತ್ತು ಎಚ್‌ಐವಿ ರೋಗಿಗಳು ಈ ಶಿಲೀಂಧ್ರವಿರುವ ಈರುಳ್ಳಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಮಧುಮೇಹ ಇರುವವರಿಗೆ ಇವು ತೊಂದರೆಯೇ. ಆಸ್ತಮಾ ರೋಗಿಗಳಲ್ಲಿ, ಈ ಶಿಲೀಂಧ್ರವು ಅಲರ್ಜಿಯ ದಾಳಿಗೆ ಕಾರಣವಾಗಬಹುದು,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.