

ಆಂಧ್ರಪ್ರದೇಶ: ನ.01ರಂದು ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ (Kashibugga Stampede) 10 ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ದೇವಾಲಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಚ್ಚರಿ ವಿಷಯಗಳು ಹೊರಬಿದ್ದಿವೆ.
ಅಸಲಿಗೆ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ದತ್ತಿ ಇಲಾಖೆಗೆ ವ್ಯಾಪ್ತಿಗೆ ಸೇರಿಲ್ಲ. 95 ವರ್ಷದ ಹರಿಮುಕುಂದ್ ಪಾಂಡ ಎಂಬ ಹಿರಿಯ ವ್ಯಕ್ತಿ ತಮ್ಮ ಸ್ವಂತ ಭೂಮಿಯಲ್ಲಿ ಈ ದೇಗುಲವನ್ನು ನಿರ್ಮಿಸಿದ್ದಾರೆ. ಹರಿ ಮೂಲತಃ ಒಡಿಶಾದ ರಾಜಮನೆತನಕ್ಕೆ ಸೇರಿದವರು ಎನ್ನಲಾಗಿದೆ. ಇದಕ್ಕೆ ಕಾರಣ, ಅಂದು ಅವರಿಗಾದ ಬೇಸರ. 12 ವರ್ಷಗಳ ಹಿಂದೆ ತಿರುಮಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಭಗವಂತನ ದರ್ಶನ ತೃಪ್ತಿಕರವಾಗಿರಲಿಲ್ಲ. ಇದು ಪಾಂಡರಿಗೆ ಅಸಮಾಧಾನ ಮೂಡಿಸಿತ್ತು. ಹೀಗಾಗಿ, ಅವರ ಕುಟುಂಬವು ಪಲಾಸದಲ್ಲಿ ತಿರುಮಲದಂತಹ ದೇವಾಲಯವನ್ನೇ ನಿರ್ಮಿಸಲು ನಿರ್ಧರಿಸಿತು.
ತಮ್ಮ 12 ಎಕರೆ ಭೂಮಿಯನ್ನು ಮಂಜೂರು ದೇವಾಲಯ ನಿರ್ಮಾಣಕ್ಕೆ ಮೀಸಲಿಟ್ಟರು. ಅವರ ತಾಯಿ ಸ್ವತಃ ವಾಸ್ತುಶಿಲ್ಪಿಯಾಗಿದ್ದರಿಂದ, ಯಾವ ವಿಗ್ರಹವನ್ನು ಎಲ್ಲಿಡಬೇಕು ಮತ್ತು ಯಾವ ಕಲ್ಲುಗಳನ್ನು ಬಳಸಿ ವಿಗ್ರಹಗಳನ್ನು ತಯಾರಿಸಬೇಕು ಎಂಬ ವಿಷಯಗಳಲ್ಲಿ ಹರಿ ಅವರಿಗೆ ಸಹಾಯ ಮಾಡಿದ್ದರಂತೆ. ತಮ್ಮ ಸ್ವಂತ ಹಣದಿಂದ ದೇವಸ್ಥಾನವನ್ನು ನಿರ್ಮಿಸಿದ್ದು, ಅದಕ್ಕಾಗಿ ಸುಮಾರು 10 ಕೋಟಿ ರೂ. ಖರ್ಚು ತಗುಲಿತು ಎಂದು ಪಾಂಡ ಅವರ ಕುಟುಂಬ ತಿಳಿಸಿದೆ.
ಅಷ್ಟಕ್ಕೂ ಕಾಶಿಬುಗ್ಗ ದೇವಸ್ಥಾನವು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಖಾಸಗಿ ವ್ಯಕ್ತಿಯಿಂದ ನಿರ್ಮಿಸಲ್ಪಟ್ಟಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅನೇಕರಲ್ಲಿ ಗೊಂದಲ, ಅನುಮಾನಗಳು ಮೂಡಿವೆ. ಯಾರಾದರೂ ತಮ್ಮ ಸ್ವಂತ ಹಣದಿಂದ ತಮ್ಮ ಸ್ವಂತ ಭೂಮಿಯಲ್ಲಿ ದೇವಸ್ಥಾನವನ್ನು ನಿರ್ಮಿಸಬಹುದೇ? ಇದಕ್ಕೆ ಕಾನೂನು ನಿಯಮಗಳಿವೆಯೇ? ಇದ್ದರೆ ಅವು ಯಾವುವು? ನಾವು ಉತ್ತರಗಳನ್ನು ನೋಡಿದರೆ, ಒಬ್ಬ ವ್ಯಕ್ತಿಯು ತಮ್ಮ ಸ್ವಂತ ವೈಯಕ್ತಿಕ ಭೂಮಿಯಲ್ಲಿ ಧಾರ್ಮಿಕ ರಚನೆಗಳನ್ನು ನಿರ್ಮಿಸಬಹುದು. ಸಂವಿಧಾನದ 25 ಮತ್ತು 26ನೇ ವಿಧಿಗಳು ಈ ನಿಟ್ಟಿನಲ್ಲಿ ರಕ್ಷಣೆ ನೀಡುತ್ತವೆ.
ಈ ಬಗ್ಗೆ ಹಿಂದೆ ಹಲವು ನ್ಯಾಯಾಲಯದ ತೀರ್ಪುಗಳು ಬಂದಿವೆ. ಅಲಹಾಬಾದ್ ಹೈಕೋರ್ಟ್ ಕೂಡ ಒಬ್ಬ ವ್ಯಕ್ತಿಯು ತನ್ನ ಸ್ವಂತ ಹಣದಿಂದ ತನ್ನ ಸ್ವಂತ ಭೂಮಿಯಲ್ಲಿ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಬಹುದು ಎಂದು ಹೇಳಿದೆ. ಆದಾಗ್ಯೂ, ಅದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು. ಇತರರ ಆರೋಗ್ಯ ಮತ್ತು ನೈತಿಕತೆಗೆ ಹಾನಿಗೊಳಿಸಬಾರದು. ಇದರೊಟ್ಟಿಗೆ ಇತರ ಧರ್ಮಗಳ ನಂಬಿಕೆಗಳಿಗೆ ಘಾಸಿಯಾಗುವ ರೀತಿಯಲ್ಲಿಯೂ ಇರಬಾರದು ಎಂಬ ವಿಷಯ ಇಲ್ಲಿ ಗಮನಾರ್ಹ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪೂಜಾ ಸ್ಥಳಗಳನ್ನು ನಿರ್ಮಿಸುವುದನ್ನು ನಿಷೇಧಿಸಲಾಗಿದೆ. ಇದರರ್ಥ ಉದ್ಯಾನವನಗಳು ಅಥವಾ ರಸ್ತೆಗಳಲ್ಲಿ ಯಾವುದೇ ಮೂರ್ತಿ, ವಿಗ್ರಹಗಳನ್ನು ನಿರ್ಮಿಸಬಾರದು. ಪೂರ್ಣ ಅಧಿಕಾರ, ಅನುಮತಿ ಪಡೆದ ನಂತರವೇ ನಿರ್ಮಾಣ ಮಾಡಬಹುದು.
ನೀವು ನಿಮ್ಮ ಸ್ವಂತ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದರೂ ಸಹ, ಅದಕ್ಕೆ ಖಂಡಿತವಾಗಿಯೂ ಅನುಮತಿಯನ್ನು ಪಡೆಯತಕ್ಕದ್ದು. ಸ್ಥಳೀಯ ಪೊಲೀಸ್, ಪಂಚಾಯತಿ ಅಥವಾ ಪುರಸಭೆ ಮತ್ತು ಪೊಲೀಸ್ ಇಲಾಖೆಯ ನಿರ್ಮಾಣ ಪರವಾನಗಿಗಳನ್ನು ಪಡೆಯಬೇಕು. ಅಲ್ಲದೆ, ಆ ನಿರ್ಮಾಣದಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ನೀವು ಕಾರ್ಮಿಕ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,(ಏಜೆನ್ಸೀಸ್).