ಕಾಶಿಬುಗ್ಗ ಕಾಲ್ತುಳಿತ: ಯಾರು ಈ ಹರಿಮುಕುಂದ್ ಪಾಂಡ? ಸ್ವಂತ ಜಾಗದಲ್ಲಿ ದೇಗುಲ ಕಟ್ಟಿಸಿದ್ದೇಕೆ ಈತ? | Kasibugga Temple

ಕಾಶಿಬುಗ್ಗ ಕಾಲ್ತುಳಿತ: ಯಾರು ಈ ಹರಿಮುಕುಂದ್ ಪಾಂಡ? ಸ್ವಂತ ಜಾಗದಲ್ಲಿ ದೇಗುಲ ಕಟ್ಟಿಸಿದ್ದೇಕೆ ಈತ? | Kasibugga Temple
Published on

ಆಂಧ್ರಪ್ರದೇಶ: ಇಂದು (ನ.01) ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ (Kasibugga Temple) 10 ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂದೆ ಉಂಟಾಗಿದ್ದ ಕಾಲ್ತುಳಿತ ಪ್ರಕರಣಗಳು ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ನಡೆದಿರುವುದು ಸದ್ಯ ರಾಜ್ಯದ ಜನತೆಯಲ್ಲಿ ತೀವ್ರ ಆಘಾತ ತಂದೊಡ್ಡಿದೆ. ಈ ದುರ್ಘಟನೆ ಬೆನ್ನಲ್ಲೇ ಇದೀಗ ಹಲವರು ಅಚ್ಚರಿ ಸಂಗತಿಗಳು ಹೊರಬಿದ್ದಿವೆ.

ಸ್ವಂತ ಜಾಗದಲ್ಲಿ ಕಾಶಿಬುಗ್ಗ ದೇಗುಲ

ದೇವಾಲಯವನ್ನು ಕಟ್ಟಿಸಿದ 95 ವರ್ಷದ ಹರಿಮುಕುಂದ್ ಪಾಂಡ, ತಮ್ಮ ಸ್ವಂತ ಜಾಗದಲ್ಲಿ ಕಾಶಿಬುಗ್ಗ ದೇಗುಲವನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಕಾರಣ, ಅಂದು ಅವರಿಗಾದ ಬೇಸರ. ಮೂಲತಃ ಆಂಧ್ರದ ಪಲಾಸದ ಹರಿಮುಕುಂದ್​ ಅವರು, 12 ವರ್ಷಗಳ ಹಿಂದೆ ತಿರುಮಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಭಗವಂತನ ದರ್ಶನ ತೃಪ್ತಿಕರವಾಗಲಿಲ್ಲ. ಇದು ಪಾಂಡರಿಗೆ ಅಸಮಾಧಾನ ಮೂಡಿಸಿತ್ತು. ಹೀಗಾಗಿ, ಅವರ ಕುಟುಂಬವು ಪಲಾಸದಲ್ಲಿ ತಿರುಮಲದಂತಹ ದೇವಾಲಯವನ್ನೇ ನಿರ್ಮಿಸಲು ನಿರ್ಧರಿಸಿತು.

ತಿರುಪತಿ ದರ್ಶನಕ್ಕೆ ಅಡ್ಡಿ

ಆಡಳಿತ ಮಂದಿ ದೇವರನ್ನು ನೋಡಲು ಬಿಡದೆ, ತಳ್ಳಿದರು ಎಂಬ ಕಾರಣಕ್ಕೆ ದುಃಖಿತರಾದ ಪಾಂಡ, ತಮ್ಮ ತಾಯಿಗೆ ದೇಗುಲ ಕಟ್ಟುವ ವಿಷಯವನ್ನು ತಿಳಿಸಿದರು. ಇದಕ್ಕಾಗಿ, ಪಲಾಸ ನಗರದ ಅತ್ಯಂತ ದುಬಾರಿ ಪ್ರದೇಶದಲ್ಲಿ 12 ಎಕರೆ ಭೂಮಿಯನ್ನು ಖರೀದಿಸಿ, ಐದು ವರ್ಷಗಳಲ್ಲಿ ದೇವಾಲಯವನ್ನು ನಿರ್ಮಿಸಿದರು. ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯದಂತೆಯೇ ಈ ದೇವಾಲಯವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಕಟ್ಟಿದ್ದಾರೆ.

ಹರಿಮುಕುಂದ್​ ಒಡಿಶಾದ ರಾಜಮನೆತನಕ್ಕೆ ಸೇರಿದವರು ಎನ್ನಲಾಗಿದೆ. ಐದು ವರ್ಷಗಳ ಕಾಲ ಹಗಲಿರುಳು ದುಡಿದು, ಯಾರಿಂದಲೂ ಒಂದು ರೂಪಾಯಿಯನ್ನೂ ನಿರೀಕ್ಷಿಸದೆ ಒಂದಷ್ಟು ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾಗಿ ಮುಕಂದ್​ ಅವರ ಕುಟುಂಬ ಹೇಳಿಕೊಂಡಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಯಾವ ಇಂಜಿನಿಯರ್ ಸಹಾಯ ತೆಗೆದುಕೊಳ್ಳದ ಹರಿಮುಕುಂದ್​, ತಮ್ಮ ತಾಯಿ ವಾಸ್ತು ವಿಷಯದಲ್ಲಿ ನಿಪುಣರಾಗಿದ್ದ ಹಿನ್ನೆಲೆ ಅವರ ಸಹಾಯದಿಂದಲೇ ದೇಗುಲದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದರು ಎಂದು ಹೇಳಲಾಗಿದೆ.

ಶಿಲ್ಪಕಲೆಗೆ ಆದ್ಯತೆ

ಉದಾಹರಣೆಗೆ ದೇವಾಲಯವನ್ನು ಎಲ್ಲಿ ನಿರ್ಮಿಸಬೇಕು? ಯಾವ ವಿಗ್ರಹವನ್ನು ಸ್ಥಾಪಿಸಬೇಕು? ಯಾವ ರೀತಿಯ ಶಿಲ್ಪಗಳನ್ನು ಇಡಬೇಕು? ಎಂಬುದನ್ನು ತಾಯಿಯ ಸಹಾಯದಿಂದ ಮಾಡಿದ್ದಾರೆ. ದೇವಾಲಯದಲ್ಲಿ ಶಿಲ್ಪಕಲೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ತೆಲುಗು ರಾಜ್ಯಗಳು ಮತ್ತು ಜೈಪುರದಿಂದ ಅನೇಕ ಏಕಶಿಲೆಯ ವಿಗ್ರಹಗಳನ್ನು ತಂದು ದೇಗುಲದಲ್ಲಿ ಸ್ಥಾಪಿಸಲಾಗಿದೆ.

ದೇಗುಲದ ನಿರ್ಮಾಣವು 7 ವರ್ಷಗಳ ಹಿಂದೆ ಪ್ರಾರಂಭವಾಗಿ, 2023ರಲ್ಲಿ ಪೂರ್ಣಗೊಂಡಿತು. ಇಂದು ಅದೇ ಕಾಶಿಬುಗ್ಗದಲ್ಲಿ ಕಾಲ್ತುಳಿತ ಉಂಟಾಗಿರುವುದು ಸದ್ಯ ದುಃಖಕರ ಸಂಗತಿಯಾಗಿದೆ. ಹಿರಿಯ ವಯಸ್ಸಿನಲ್ಲಿಯೂ ದೇಗುಲದ ಕಾರ್ಯಗಳನ್ನು ಮಾಡುತ್ತಿರುವ ಹರಿಮುಕುಂದ್​, ಘಟನೆಯಿಂದ ತೀರ ಮನನೊಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net