ಕಾಶಿಬುಗ್ಗ ಕಾಲ್ತುಳಿತದಲ್ಲಿ 10 ಭಕ್ತರು ಸಾವು: ದೇವಸ್ಥಾನ ಕಟ್ಟಿಸಿದ ವ್ಯಕ್ತಿಯಿಂದ ಹೊರಬಿತ್ತು ಅಚ್ಚರಿ ಹೇಳಿಕೆ | Kashibugga Temple Stampede

ಕಾಶಿಬುಗ್ಗ ಕಾಲ್ತುಳಿತದಲ್ಲಿ 10 ಭಕ್ತರು ಸಾವು: ದೇವಸ್ಥಾನ ಕಟ್ಟಿಸಿದ ವ್ಯಕ್ತಿಯಿಂದ ಹೊರಬಿತ್ತು ಅಚ್ಚರಿ ಹೇಳಿಕೆ | Kashibugga Temple Stampede
Published on

ಆಂಧ್ರಪ್ರದೇಶ: ಇಂದು (ನ.01) ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ (Kashibugga Temple Stampede) 10 ಭಕ್ತರು ದಾರುಣವಾಗಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂದೆ ಉಂಟಾಗಿದ್ದ ಕಾಲ್ತುಳಿತ ಪ್ರಕರಣಗಳು ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ನಡೆದಿರುವುದು ಸದ್ಯ ಜನರಲ್ಲಿ ತೀರ ಆಘಾತ ತಂದೊಡ್ಡಿದೆ.

ಕಾರ್ತಿಕ ಮಾಸದ ಏಕಾದಶಿ ಹಬ್ಬವಾಗಿದ್ದರಿಂದ, ವೈಷ್ಣವ ಪೂಜೆಗಾಗಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಗವಂತನ ದರ್ಶನ ಪಡೆಯಲು ಭಕ್ತಾಧಿಗಳು ನಿರೀಕ್ಷೆಗೂ ಮೀರಿ ಆಗಮಿಸಿದ್ದೇ, ಈ ದುರಂತಕ್ಕೆ ಮೂಲ ಕಾರಣ. ಇನ್ನು ಘಟನೆ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ದೇಗುಲ ಕಟ್ಟಿಸಿದ ಮಾಲೀಕ ಮಾತನಾಡಿ, ಒಂದಷ್ಟು ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದೇವಾಲಯದ ಮಾಲೀಕರಾದ 95 ವರ್ಷದ ಹರಿಮುಕುಂದ್ ಪಾಂಡ ಎಂಬುವವರು ಕಡೆಗೂ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇಷ್ಟೊಂದು ಭಕ್ತರು ಬರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಅಷ್ಟಕ್ಕೂ ಹಿಂದೆಂದೂ ಈ ಸಂಖ್ಯೆಯಲ್ಲಿ ಇಲ್ಲಿಗೆ ಜನ ಬಂದಿರಲಿಲ್ಲ. ಭಕ್ತಾಧಿಗಳು ದ್ವಾರಗಳನ್ನು ತಳ್ಳಿ ಮುನ್ನುಗ್ಗಿದರು. ಪ್ರತಿದಿನ 3,000ದಿಂದ 4,000 ಜನರು ದೇಗುಲಕ್ಕೆ ಬರುತ್ತಾರೆ. ಯಾರೂ ಹೀಗೆ ನೂಕುನುಗ್ಗಲು ಮಾಡಿರಲಿಲ್ಲ. ಎಲ್ಲರೂ ಸಾಲಿನಲ್ಲಿಯೇ ಸಾಗುತ್ತಿದ್ದರು. ಒಮ್ಮೆಲೇ ದೊಡ್ಡ ಜನಸಮೂಹ ಬಂದಿದ್ದು ಅಚ್ಚರಿ ತಂದಿತು ಎಂದಿದ್ದಾರೆ.

ಇಷ್ಟೊಂದು ಜನರು ಎಲ್ಲಿಂದ ಬಂದರೋ ಗೊತ್ತಿಲ್ಲ. ಪ್ರತಿದಿನ ಬರುತ್ತಿದ್ದ 4,000 ಸಂಖ್ಯೆಯ ಭಕ್ತಾಧಿಗಳನ್ನು ನಾನೊಬ್ಬನೇ ನಿರ್ವಹಿಸುತ್ತಿದ್ದೆ. ನಾನು ಎಲ್ಲರಿಗೂ ಎಚ್ಚರಿಕೆಯಿಂದ ಹೋಗುವಂತೆ ಹೇಳುತ್ತಿದ್ದೆ. ಹೋದವರು ದರ್ಶನ ಪಡೆದು ತೆರಳುತ್ತಿದ್ದರು. ಹೀಗಿದ್ದರೂ ಹೇಗೆ ಹೀಗಾಯಿತು ಎಂದು ತಿಳಿಯುತ್ತಿಲ್ಲ ಎಂದು ಹರಿ ಮುಕುಂದ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net