ಪಾಕಿಸ್ತಾನಕ್ಕೆ ಕಾದಿದೆ ದೊಡ್ಡ ಗಂಡಾಂತರ! ಭಾರತದ ಆ ಒಂದು ಗಟ್ಟಿ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ | Pakistan

ಪಾಕಿಸ್ತಾನಕ್ಕೆ ಕಾದಿದೆ ದೊಡ್ಡ ಗಂಡಾಂತರ! ಭಾರತದ ಆ ಒಂದು ಗಟ್ಟಿ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ | Pakistan
Published on

ನವದೆಹಲಿ: ವೈರಿ ರಾಷ್ಟ್ರಕ್ಕೆ ಇನ್ನು ಮುಂದಿದೆ ಮಾರಿಹಬ್ಬ ಎನ್ನವಂತಾಗಿದೆ ಸದ್ಯದ ಪರಿಸ್ಥಿತಿ. ಹೌದು, ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಪಾಕ್​ನೊಂದಿಗಿನ (Pakistan) ಎಲ್ಲ ಸಂಪರ್ಕಗಳನ್ನು ಕಡಿದುಕೊಂಡ ಭಾರತ, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಖಡಕ್ ಎಚ್ಚರಿಕೆಯನ್ನು ರವಾನಿಸಿತು. ಇದಾದ ಬಳಿಕ ನೀರು ಬಿಡುವಂತೆ ಭಾರತವನ್ನು ಪಾಕ್​ ಅಂಗಲಾಚಿ ಬೇಡಿಕೊಂಡರೂ ಭಾರತ ಕ್ಯಾರೇ ಎನ್ನಲಿಲ್ಲ. ಮುಂದಿನ ದಿನಗಳಲ್ಲಿ ಹನಿ ನೀರಿಗೆ ಭಾರೀ ಪರದಾಡುವ ಮುನ್ಸೂಚನೆ ಸದ್ಯ ಪಾಕ್​ಗೆ​ ಗೋಚರಿಸಿದ್ದು, ಈ ಬಿಸಿ ಬೇಸಿಗೆ ಕಾಲದಲ್ಲಿ ತಟ್ಟಲಿದೆ ಎಂಬುದು ಗಮನಾರ್ಹ.

ಪಾಕಿಸ್ತಾನದ ಕೃಷಿಯ ಶೇ.80ರಷ್ಟು ಭಾಗವು ಸಿಂಧೂ ನದಿ ಜಲಾನಯನ ಪ್ರದೇಶದ ನೀರಿನ ಮೇಲೆ ಅವಲಂಬಿತವಾಗಿದೆ. ಆದಾಗ್ಯೂ, ಈ ಜಲಾನಯನ ಪ್ರದೇಶದ ಬಹುಪಾಲು ಭಾರತದಲ್ಲಿದೆ. ಈಗಾಗಲೇ ನೀರಿನ ಹಂಚಿಕೆಯನ್ನು ತಡೆದಿರುವ ಭಾರತ ಮುಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಿಸಿದರೆ, ಒಂದು ಹನಿ ನೀರೂ ಪಾಕ್​ ಭೂಮಿಗೆ ಸೋಕುವುದಿಲ್ಲ. ಇದು ಪಾಕ್​ ಕೃಷಿ ವಲಯಕ್ಕೆ ಮಾತ್ರವಲ್ಲ, ಇಡೀ ದೇಶವನ್ನು ವಿನಾಶಕ್ಕೆ ದೂಡುತ್ತದೆ ಎಂದು ಇತ್ತೀಚಿನ 'ಎಕಾಲಜಿಕಲ್ ಥ್ರೆಟ್​​ ವರದಿ' (Ecological Threat Report 2025) ಎಚ್ಚರಿಸಿದೆ.

ಮುಂದಿನ ದಿನಗಳಲ್ಲಿ ಭಾರತದ ಕಟು ನಿರ್ಧಾರದಿಂದ ಪಾಕಿಸ್ತಾನವು ತೀವ್ರ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ವರದಿ ಹೇಳಿದೆ. ಪಾಕಿಸ್ತಾನದಲ್ಲಿರುವ ಅಣೆಕಟ್ಟುಗಳು 30 ದಿನಗಳಿಗಿಂತ ಹೆಚ್ಚು ಕಾಲ ನೀರನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ. ಇದು ದೀರ್ಘಕಾಲದವರೆಗೆ ಕೃಷಿಯನ್ನು ಅಡ್ಡಿಪಡಿಸುತ್ತದೆ ಮತ್ತು ದೇಶದ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂದು ವರದಿ ಎಚ್ಚರಿಕೆ ರವಾನಿಸಿದೆ. ಮತ್ತೊಂದರಲ್ಲಿ, ಸಿಂಧೂ ನದಿಯ ಹರಿವನ್ನು ತಿರುಗಿಸಿರುವ ಭಾರತದ ಸಾಮರ್ಥ್ಯದಿಂದಾಗಿ ಪಾಕಿಸ್ತಾನವು ತೀವ್ರ ನೀರಿನ ಕೊರತೆಯ ಅಪಾಯವನ್ನು ಎದುರಿಸುತ್ತಿದೆ ಎಂದು ಸಿಡ್ನಿಯ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ ಬಹಿರಂಗಪಡಿಸಿದೆ.

ಬೇಸಿಗೆಯಲ್ಲಿ ಹನಿ ನೀರಿಗೂ ಹಾಹಾಕಾರ!

ಭಾರತವು ನೀರಿನ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಲು ಅಥವಾ ತಿರುಗಿಸಲು ಸಾಧ್ಯವಾಗದಿದ್ದರೂ, ಅಣೆಕಟ್ಟು ಕಾರ್ಯಾಚರಣೆಗಳಲ್ಲಿನ ಸಣ್ಣ ಹೊಂದಾಣಿಕೆಗಳು ಸಹ ಪಾಕ್​ ಮೇಲೆ ತೀವ್ರ ಪರಿಣಾಮ ಬೀರಲಿವೆ. ಬೇಸಿಗೆಯಂತಹ ಪ್ರಮುಖ ಸಮಯಗಳಲ್ಲಿ, ಇದು ಪಾಕಿಸ್ತಾನದ ಜನನಿಬಿಡ ಪ್ರದೇಶಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ. ಈ ಪ್ರದೇಶಗಳಲ್ಲಿ, ಶೇ.8೦ರಷ್ಟು ನೀರು ಕೃಷಿಗಾಗಿ ಸಿಂಧೂ ಜಲಾನಯನ ಪ್ರದೇಶದ ನೀರಿನ ಮೇಲೆ ಅವಲಂಬಿತವಾಗಿದೆ.

ಭಾರತ ಮಾತ್ರವಲ್ಲ....

ಭಾರತ ಮಾತ್ರವಲ್ಲದೆ, ಇದೀಗ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನಕ್ಕೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಕುನಾರ್ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ತಾಲಿಬಾನ್​ ರಾಷ್ಟ್ರ ತೆರೆಮರೆಯಲ್ಲಿ ಚುರುಕುಗೊಳಿಸಿದೆ. ಈ ರೀತಿಯಾಗಿ, ಪಾಕಿಸ್ತಾನ ಗಡಿಯ ನೀರಿನ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪಾಕಿಸ್ತಾನದ ರೈತರು ಈಗಾಗಲೇ ತೀವ್ರ ಹವಾಮಾನ ಬದಲಾವಣೆಯಿಂದ ಬಳಲುತ್ತಿದ್ದು, ಅಕ್ಕ-ಪಕ್ಕದ ರಾಷ್ಟ್ರಗಳ ಕಟು ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ತತ್ತರಿಸಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net