ಡಿಎಲ್‌ಗೆ ಜೂ.1ರಿಂದ ಹೊಸ ನಿಯಮ: ಟೆಸ್ಟ್‌ಗಾಗಿ ಆರ್‌ಟಿಒಗೆ ಹೋಗಬೇಕಿಲ್ಲ, ಡ್ರೈವಿಂಗ್ ಸ್ಕೂಲಲ್ಲೇ ಪರೀಕ್ಷೆ

Driving Licence
Published on

ನವದೆಹಲಿ: ವಾಹನ ಚಾಲನಾ ಪರವಾನಿಗೆ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನಿಯಮಾವಳಿ ರೂಪಿಸಿದ್ದು, ಜೂನ್ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ, ವಾಹನ ಚಾಲನಾ ಪರವಾನಿಗೆ ಪಡೆಯಲು ಇಚ್ಛಿಸುವವರು ಆರ್‌ಟಿಒ ಕಚೇರಿಗೆ ಹೋಗಿ ವಾಹನ ಚಾಲನೆ ಮಾಡಿ ತೋರಿಸುವ ಅವಶ್ಯಕತೆ ಇಲ್ಲ. ಈ ಟೆಸ್ಟ್ ನಡೆಸುವ ಹೊಣೆಯನ್ನು ಸರ್ಕಾರ ಇನ್ನು ಮುಂದೆ ಖಾಸಗಿ ಡ್ರೈವಿಂಗ್‌ ಸ್ಕೂಲ್‌ಗಳಿಗೆ ನೀಡಲಿದೆ.

ಸರ್ಕಾರದಿಂದ ಅಧಿಕೃತ ಪರವಾನಿಗೆ ಪಡೆದ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನಗಳ ಚಾಲನೆಯನ್ನು ಕಲಿತು, ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟೆಸ್ಟ್ ನೀಡಬೇಕು. ಅದರಲ್ಲಿ ಪಾಸಾದರೆ, ಆ ಖಾಸಗಿ ಸಂಸ್ಥೆಯವರೇ ಡ್ರೈವಿಂಗ್ ಲೈಸೆನ್ಸ್ ನೀಡಲಿದ್ದಾರೆ.

ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣದಲ್ಲೂ ಬದಲಾವಣೆ ಮಾಡಲಾಗಿದೆ. ಅತಿವೇಗದ ಪ್ರಯಾಣಕ್ಕೆ 1,000 ರೂಗಳಿಂದ 2,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು ಕಾರು ಚಲಾಯಿಸಿದರೆ 25 ಸಾವಿರ ರೂ. ದಂಡ ವಿಧಿಸುವುದಲ್ಲದೆ, ಆ ಕಾರು ಮಾಲೀಕರ ರಿಜಿಸ್ಟ್ರೇಶನ್ ರದ್ದಾಗಲಿದೆ. ತಪ್ಪಿತಸ್ಥ ಅಪ್ರಾಪ್ತ ವಯಸ್ಕನಿಗೆ 25 ವರ್ಷಗಳವರೆಗೆ ಲೈಸೆನ್ಸ್‌ ನೀಡುವುದಿಲ್ಲ.

ಇದಲ್ಲದೆ ಸರ್ಕಾರದಿಂದ ಡೈವಿಂಗ್ ಸ್ಕೂಲ್ ನಡೆಸುವುದಕ್ಕಾಗಿ ಅಧಿಕೃತ ಪರವಾನಿಗೆ ಪಡೆಯುವ ಖಾಸಗಿ ಸಂಸ್ಥೆಗಳಿಗೂ ಹಲವು ಮಾನದಂಡಗಳನ್ನು ರೂಪಿಸಲಾಗಿದೆ. ಆ ಸಂಸ್ಥೆ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು (4 ಚಕ್ರಗಳ ವಾಹನ ತರಬೇತಿಗೆ 2 ಎಕರೆ). ಟೆಸ್ಟಿಂಗ್ ಫೆಸಿಲಿಟಿ ಇರಬೇಕು. ಟ್ರೇನ‌ರ್ ಗಳು 5 ವರ್ಷ ಚಾಲನಾ ಅನುಭವವಲ್ಲದೆ, ಹೈಸ್ಕೂಲ್ ವರೆಗಿನ ವ್ಯಾಸಂಗ ಮಾಡಿರಬೇಕು. ಬಯೋಮೆಟ್ರಿಕ್ಸ್, ಐಟಿ ಸಿಸ್ಟೆಮ್ ಬಗ್ಗೆ ಗೊತ್ತಿರಬೇಕು. ಇದಲ್ಲದೆ ತರಬೇತಿಗೆ ಕಾಲಾವಧಿಯನ್ನೂ ನಿಗದಿಪಡಿಸಲಾಗಿದೆ.

ಇದೇ ವೇಳೆ ಲೈಸೆನ್ಸ್, ಅರ್ಜಿ ಮುಂತಾದ ಶುಲ್ಕವನ್ನೂ ಸರ್ಕಾರ ಪ್ರಕಟಿಸಿದೆ. ಲರ್ನಿಂಗ್ ಲೈಸೆನ್ಸ್ - ಫಾರ್ಮ್ 3- 150 ರೂ., ಲರ್ನಿಂಗ್ ಲೈಸೆನ್ಸ್ ಪರೀಕ್ಷಾ ಶುಲ್ಕ ಅಥವಾ ಮರುಯತ್ನ- 50 ರೂ., ಡೈವಿಂಗ್ ಲೈಸೆನ್ಸ್ ಟೆಸ್ಟ್ ಶುಲ್ಕ- 300ರೂ., ಡೈವಿಂಗ್ ಲೈಸೆನ್ಸ್ ನೀಡುವ ಶುಲ್ಕ - 200 ರೂ., ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಶುಲ್ಕ- 1000 ರೂ., ಹೆಚ್ಚುವರಿ ವಾಹನ ಕ್ಲಾಸ್ ಲೈಸೆನ್ಸ್ ಶುಲ್ಕ- 500 ರೂ., ಲೈಸೆನ್ಸ್‌ ನವೀಕರಣ ಶುಲ್ಕ - 200 ರೂ., ಅವಧಿ ಬಳಿಕ ಲೈಸೆನ್ಸ್ ನವೀಕರಣ ಶುಲ್ಕ - 300 ರೂ., ಅವಧಿ ಮುಗಿದ ಒಂದು ವರ್ಷದ ಬಳಿಕ ನವೀಕರಣ- 1000 ರೂಪಾಯಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net