ಹೊಸ ಸಂಸತ್​ ಭವನದ ಭೂಮಿ ಪೂಜೆಗೆ ಮುಹೂರ್ತ ಫಿಕ್ಸ್​; ಮುಂದಿನ ವರ್ಷದ ಸ್ವಾತಂತ್ರ್ಯೋವಕ್ಕೆ ಸಿದ್ಧ

parliment
Published on

ನವದೆಹಲಿ: ಹೊಸದಾಗಿ ನಿರ್ಮಾಣವಾಗಲಿರುವ ಸಂಸತ್​ ಭವನಕ್ಕೆ ಭೂಮಿ ಪೂಜೆ ನಡೆಸುವ ದಿನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಡಿಸೆಂಬರ್​ 10ರಂದು ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿದ್ದು, 2021ರ ಆಗಸ್ಟ್​ 15ರ ವೇಳೆಗೆ ನೂತನ ಸಂಸತ್​ ಭವನ ಸಿದ್ಧವಿರಲಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅವರು ತಿಳಿಸಿದ್ದಾರೆ.

ಭಾರತದ 75ನೇ ಸ್ವಾತಂತ್ರೋತ್ಸವದ ಸಮಯದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಅಧಿವೇಶನವನ್ನು ನಡೆಸಲಾಗುವುದು. ಈ ಅಧಿವೇಶನ ಹೊಸ ಸಂಸತ್​ ಭವನದಲ್ಲಿಯೇ ನಡೆಯಲಿದೆ. ಡಿಸೆಂಬರ್​ 10ರಂದು ಮಧ್ಯಾಹ್ನ 1 ಗಂಟೆಗೆ ಮೊದಲನೇ ಕಲ್ಲನ್ನಿಟ್ಟು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೊಸ ಸಂಸತ್​ ಭವನವು ಈಗಿರುವ ಸಂಸತ್​ ಭವನಕ್ಕಿಂತ 17 ಸಾವಿರ ಚದರ ಮೀಟರ್​ ದೊಡ್ಡದಾಗಿರಲಿದೆ. ಒಟ್ಟು 64,500 ಚದರ ಮೀಟರ್​ನಲ್ಲಿ ಸಂಸತ್​ ನಿರ್ಮಿಸಲಾಗುವುದು. ಲೋಕಸಭೆಯಲ್ಲಿ 888 ಸದಸ್ಯರಿಗೆ ಸೀಟುಗಳನ್ನು ಅಳವಡಿಸಲಾಗುವುದು. ರಾಜ್ಯಸಭೆಯಲ್ಲಿ 326 ಸೀಟುಗಳಿರಲಿವೆ. ಲೋಕಸಭೆಯೊಂದರಲ್ಲೇ 1224 ಜನರಿಗೆ ಕೂರುವ ಅವಕಾಶವಿರಲಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿರಲಿದೆ. 2000 ಕಾರ್ಮಿಕರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಟ್ಟು 971 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸತ್​ ಭವನ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಆತ್ಮನಿರ್ಭರ ಭಾರತದ ದೇವಸ್ಥಾನ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net