ನೂತನ ಸಂಸತ್ ಭವನ ಇಂದು ಲೋಕಾರ್ಪಣೆ; ಮೋದಿಯಿಂದ ಉದ್ಘಾಟನೆ, ಧಾರ್ವಿುಕ ಆಚರಣೆ

Modi
Published on

ನವದೆಹಲಿ: ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದು, ಬೆಳಗ್ಗೆ ಏಳು ಗಂಟೆಯಿಂದ ಧಾರ್ವಿುಕ ವಿಧಿವಿಧಾನಗಳು ಸೇರಿ ಅಂದಾಜು ಏಳು ತಾಸು ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭವು ಹವನ ಮತ್ತು ಪೂಜೆಯೊಂದಿಗೆ ಆರಂಭವಾಗಿ ಪ್ರಧಾನಿ ಮೋದಿ ಭಾಷಣದೊಂದಿಗೆ ಸಂಪನ್ನಗೊಳ್ಳಲಿದೆ. ದೇಶದ ಐತಿಹಾಸಿಕ ಕ್ಷಣದ ಸ್ಮರಣಾರ್ಥ ಹೊರತಂದ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಭವಿಷ್ಯದ ಕುರಿತ ತಮ್ಮ ದೂರದೃಷ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಪ್ರಸ್ತುತಪಡಿಸಲಿದ್ದಾರೆ.

ಕಾರ್ಯಕ್ರಮಗಳ ವಿವರ: ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ವಿಶೇಷವಾಗಿ ಅಲಂಕೃತವಾದ ಪೆಂಡಾಲ್​ನಲ್ಲಿ ಬೆಳಗ್ಗೆ 7.30ರಿಂದ 8.30ರವರೆಗೆ ಪೂಜೆ ಮತ್ತು ಹವನ ನಡೆಯಲಿದೆ. ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಸಚಿವರು ಭಾಗವಹಿಸಲಿದ್ದಾರೆ.

ಸೆಂಗೋಲ್ ಸ್ಥಾಪನೆ: ಪೂಜೆಯ ನಂತರ ಐತಿಹಾಸಿಕ ಮಹತ್ವದ ‘ಸೆಂಗೋಲ್’ ಅನ್ನು (ರಾಜದಂಡ) ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಪಿಸಲಾಗುತ್ತದೆ. ಬೆಳಗ್ಗೆ 8.30ರಿಂದ 9 ಗಂಟೆ ನಡುವೆ ಈ ಪ್ರಕ್ರಿಯೆ ನಡೆಯಲಿದೆ. 9 ಗಂಟೆಗೆ ಪ್ರಾರ್ಥನಾ ಸಭೆ ಆರಂಭವಾಗಲಿದ್ದು ಖ್ಯಾತ ವಿದ್ವಾಂಸರು, ಪಂಡಿತರು ಮತ್ತು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮದ ಎರಡನೇ ಹಂತ ಆರಂಭವಾಗಲಿದೆ. ಈ ಅದ್ಭುತ ಕ್ಷಣದ ಮಹತ್ವವನ್ನು ಸಾರುವ ಎರಡು ಕಿರು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಅದಾದ ನಂತರ, ರಾಜ್ಯಸಭೆಯ ಉಪ ಸಭಾಧ್ಯಕ್ಷರು ಉಪರಾಷ್ಟ್ರಪತಿ ಜಗದೀಪ್ ಧನ್​ಕರ್ ಮತ್ತು ರಾಷ್ಟ್ರಪತಿ ದ್ರೌಪದಿ ಮುಮು ಅವರ ಸಂದೇಶ ವಾಚನ ಮಾಡಲಿದ್ದಾರೆ. ಮಧ್ಯಾಹ್ನ 2ರಿಂದ 2.30ರ ಹೊತ್ತಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವ ನಿರೀಕ್ಷೆಯಿದೆ.

ವೇಳಾಪಟ್ಟಿ ಮುಖ್ಯಾಂಶ

  • ಬೆಳಿಗ್ಗೆ 7.15: ನೂತನ ಸಂಸತ್ ಭವನ ಕಟ್ಟಡಕ್ಕೆ ಪ್ರಧಾನಿ ಮೋದಿ ಆಗಮನ.
  • 7.30: ಹವನ-ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ.
  • 8.30: ಲೋಕಸಭೆ ಚೇಂಬರ್​ಗೆ ಮೋದಿ ಆಗಮನ.
  • 9.00: ಸೆಂಗೋಲ್ ಪ್ರತಿಷ್ಠಾಪನೆ.
  • 9.30: ಪ್ರಾರ್ಥನಾ ಸಭೆ.
  • 11.30: ಗಣ್ಯಮಾನ್ಯರ ಆಗಮನ.
  • ಮಧ್ಯಾಹ್ನ 12.10: ರಾಜ್ಯ ಸಭೆ ಉಪಾಧ್ಯಕ್ಷ ಹರಿವಂಶ್​ರಿಂದ ಭಾಷಣ.
  • 12.38: ರಾಜ್ಯ ಸಭೆ ಪ್ರತಿಪಕ್ಷ ನಾಯಕರ ಭಾಷಣ (ಗೈರು ಸಂಭವ). ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ.
  • 01.05: 75 ರೂಪಾಯಿ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ.
  • 01.10: ಪ್ರಧಾನಿ ಭಾಷಣ
  • 02.00: ಕಾರ್ಯಕ್ರಮ ಮುಕ್ತಾಯ.

ಮೋದಿಗೆ ಅಧೀನಂ ಆಶೀರ್ವಾದ

ತಮಿಳುನಾಡಿನಿಂದ ಆಗಮಿಸಿದ ಅಧೀನಂ ಮಠದ ಶ್ರೀಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು. ಸ್ವಾಮೀಜಿಗಳು ಮಂತ್ರ ಪಠಣದ ನಡುವೆ ‘ಸೆಂಗೋಲ್’ ಸಹಿತ ವಿಶೇಷ ಕೊಡುಗೆಗಳನ್ನು ಮೋದಿಗೆ ಹಸ್ತಾಂತರಿಸಿದರು. ಶ್ರೀಗಳನ್ನು ವೋದಿ ಸತ್ಕರಿಸಿದರು. ಅಧಿಕಾರ ಹಸ್ತಾಂತರದ ಸಂಕೇತವಾದ ಸೆಂಗೋಲ್ ಅನ್ನು ಸಂಸತ್ತಿನ ನೂತನ ಕಟ್ಟಡದಲ್ಲಿ ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಪಿಸಲಾಗುತ್ತದೆ.

ನೂತನ ಕಟ್ಟಡದ ವೈಶಿಷ್ಟ್ಯಗಳು

  • 2020 ಡಿಸೆಂಬರ್ 10ಕ್ಕೆ ಪ್ರಧಾನಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.
  • 13 ಎಕರೆಯಲ್ಲಿ ಅಂದಾಜು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ.
  • ಲೋಕಸಭೆ ಛಾವಣಿ ನವಿಲಿನಾಕಾರದಲ್ಲಿ, ರಾಜ್ಯಸಭೆ ಕಮಲದಾಕಾರದಲ್ಲಿ ನಿರ್ಮಾಣ
  • ನೂತನ ಕಟ್ಟಡ 150 ವರ್ಷ ಬಾಳಿಕೆ ನಿರೀಕ್ಷೆ
  • ಹೊಸ ಲೋಕಸಭೆಯಲ್ಲಿ 888 ಜನ, ರಾಜ್ಯಸಭೆಯಲ್ಲಿ 384 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.
  • ಹಳೆಯ ಭವನದಲ್ಲಿ ಸೆಂಟ್ರಲ್ ಹಾಲ್ ಇದ್ದರೆ ನೂತನ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.
  • ನೂತನ ಭವನವು 4 ಅಂತಸ್ತಿನ ಕಟ್ಟಡವಾಗಿದ್ದು, 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.
  • ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ವಣ. ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ಪ್ರವೇಶ ದ್ವಾರ.
  • ಭವನದ ಮೇಲೆ ರಾಷ್ಟ್ರೀಯ ಲಾಂಛನದ ಪ್ರತಿರೂಪ ಇರಿಸಲಾಗಿದೆ. 9,500 ಕೆ.ಜಿ ಕಂಚಿನ ಪ್ರತಿಮೆ 6.5 ಮೀಟರ್ ಎತ್ತರವಿದೆ.

ಕಾರ್ಯಕ್ರಮಕ್ಕೆ ಶೃಂಗೇರಿ ಪೀಠದ ನಂಟು

ಶೃಂಗೇರಿ: ದೆಹಲಿಯಲ್ಲಿ ಭಾನುವಾರ ನಡೆಯುವ ಹೊಸ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ವಿುಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಲಿದ್ದಾರೆ.

ಶನಿವಾರ ವಾಸ್ತುಹೋಮ, ವಾಸ್ತುಪೂಜೆ ನಡೆಯಿತು. ಭಾನುವಾರ ಮಹಾಗಣಪತಿ ಹೋಮವನ್ನು ಪುರೋಹಿತರು ನೆರವೇರಿಸಲಿದ್ದಾರೆ. 2020ರ ಡಿ.10ರಂದು ಸಂಸತ್ ಭವನದ ಶಿಲಾನ್ಯಾಸ ಸಂದರ್ಭದಲ್ಲಿ ಶ್ರೀ ಶಾರದಾ ಪೀಠದಿಂದ ಡಾ. ಟಿ.ವಿ. ಶಿವಕುಮಾರ್ ಶರ್ಮ, ಕೆ.ಎಸ್. ಲಕ್ಷ್ಮೀನಾರಾಯಣ ಸೋಮಯಾಜಿ, ಕೆ.ಎಸ್. ಗಣೇಶ್ ಸೋಮಯಾಜಿ, ದೆಹಲಿ ಶಾಖಾ ಮಠದ ವೇದಶಾಲಾ ಅಧ್ಯಾಪಕ ರಾಘವೇಂದ್ರ ಭಟ್, ನಾಗರಾಜ್ ಅಡಿಗ, ಋಷ್ಯಶೃಂಗ ಭಟ್ ಭಾಗವಹಿಸಿದ್ದರು.

ಸಂಸತ್ ಭವನದ ಆಧಾರ ಶಿಲಾಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಶೃಂಗೇರಿ ಶಾರದಾ ಪೀಠದ ಡಾ. ಟಿ.ವಿ.ಶಿವಕುಮಾರ್ ಶರ್ಮ, ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ, ಕೆ.ಎಸ್.ಗಣೇಶ್ ಸೋಮಯಾಜಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net