

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಜನರಲ್ಲಿ ನಿರೀಕ್ಷೆ ಗರಿಗೆದರಿದ್ದು, ಎಲ್ಲ ವಲಯಗಳು ಸಹ ಸರ್ಕಾರದ ಕಡೆ ತಮ್ಮದೇ ಬಯಕೆಗಳೊಂದಿಗೆ ಎದುರು ನೋಡುತ್ತಿವೆ. ಕಾಂಗ್ರೆಸ್ ಚುನಾವಣೆಯಲ್ಲಿ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅವುಗಳ ಜಾರಿಯನ್ನು ಜನ ಎದುರು ನೋಡುತ್ತಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಆರೋಗ್ಯ, ಶಿಕ್ಷಣ, ಕೃಷಿ, ಮಹಿಳೆ, ಕಾರ್ವಿುಕ, ಸಾರಿಗೆ ಹೀಗೆ ವಿವಿಧ ವಲಯಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳು, ಬದಲಾಗಬೇಕಾದ ಕಾನೂನುಗಳು, ತೆರಿಗೆ ಪದ್ಧತಿ ಹೀಗೆ ವಿವಿಧ ವರ್ಗದ ಜನ ಸರ್ಕಾರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ.
ಗ್ಯಾರಂಟಿಗಳು ಒಂದು ವರ್ಗದ ಜನರನ್ನು ತೃಪ್ತಿಪಡಿಸಿದರೆ, ಜನರು ಇಟ್ಟಿರುವ ನಿರೀಕ್ಷೆಗಳು ಸಾಕಷ್ಟು ಸುಧಾರಣೆಗೆ ಕಾರಣವಾಗಲಿವೆ. ಸರ್ಕಾರ ತನ್ನ ಗ್ಯಾರಂಟಿಗಳ ಜತೆಗೆ ವಿವಿಧ ವರ್ಗದ ಜನ ಇಟ್ಟುಕೊಂಡಿರುವ ನಿರೀಕ್ಷೆಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಸಾಧ್ಯತೆ ಇದ್ದರೆ, ಮತ್ತೆ ಕೆಲವು ನೀತಿ ನಿರೂಪಣೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳಿವೆ. ಆದ್ದರಿಂದ ಸರ್ಕಾರ ಗ್ಯಾರಂಟಿಗಳ ಜತೆಗೆ ಇವುಗಳ ಕಡೆಗೂ ಗಮನ ಹರಿಸಲಿದೆ ಎಂದೇ ಆಶಿಸಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸುಧಾರಣೆಗಳು ಅಗತ್ಯ. ಈಗಾಗಲೇ ಸರ್ಕಾರದ ಮುಂದೆ ಇರುವ ಶಿಫಾರಸುಗಳನ್ನು ಜಾರಿಗೆ ತರಲಿ. | ಪ್ರೊ. ಎಂ.ಆರ್. ದೊರೆಸ್ವಾಮಿ ಶಿಕ್ಷಣ ತಜ್ಞ