ಹೊಸ ಕರೊನಾ ಮಾರ್ಗಸೂಚಿಯಲ್ಲಿ ಗ್ರಾಮ ಚಟುವಟಿಕೆಗಳಿಗೆ ಉತ್ತೇಜನ: ರೈತರು, ಕಾರ್ವಿುಕರು, ದಿನಗೂಲಿಗಳು ನಿರಾಳ

Farmer
Published on

ನವದೆಹಲಿ: ಕರೊನಾ ವಿರುದ್ಧದ ನಿರ್ಣಾಯಕ ಸಮರದ ಭಾಗವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ ಮೇ 3ರವರೆಗೆ ವಿಸ್ತರಣೆಗೊಂಡ ಬೆನ್ನಲ್ಲೇ ದಿಗ್ಬಂಧನದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಸರ್ಕಾರ ಬುಧವಾರ ಕಟ್ಟುನಿಟ್ಟಿನ ಪರಿಷ್ಕೃತ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ. ಲಾಕ್​ಡೌನ್​ನ ಮೊದಲ ಹಂತದಲ್ಲಿ ಗಳಿಸಿದ ಸಾಧನೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು, ಕರೊನಾ ಸೋಂಕು ಹರಡುವಿಕೆಯನ್ನು ಇನ್ನಷ್ಟು ನಿಧಾನಗೊಳಿಸುವ ಅನಿವಾರ್ಯತೆ ಒಳಗೊಂಡಿರುವ ಈ ಮಾರ್ಗಸೂಚಿ ಉದ್ದೇಶ ರೈತರು, ಕಾರ್ವಿುಕರು ಹಾಗೂ ದಿನಗೂಲಿಗಳ ಸಂಕಷ್ಟ ನಿವಾರಣೆಯಾಗಿರುವುದಾಗಿ ಸರ್ಕಾರ ಹೇಳಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪ್ರಕಟಣೆ ಪ್ರಕಾರ ವಿಮಾನ, ರೈಲು ಹಾಗೂ ರಸ್ತೆ ಸಂಚಾರ; ಶಿಕ್ಷಣ ಹಾಗೂ ತರಬೇತಿ ಸಂಸ್ಥೆ, ಕೈಗಾರಿಕಾ ಹಾಗೂ ವಾಣಿಜ್ಯ ಚಟುವಟಿಕೆಗಳು, ಹೋಟೆಲ್, ಸಿನಿಮಾ ಮಂದಿರಗಳು, ವಾಣಿಜ್ಯ ಸಂಕೀರ್ಣಗಳ ಚಟುವಟಿಕೆಗಳು ಸಂಪೂರ್ಣ ಮುಚ್ಚಿರುತ್ತವೆ. ಲಾಕ್​ಡೌನ್ ಮುಗಿಯುವವರೆಗೆ ಯಾವುದೇ ಸಾಮಾಜಿಕ, ರಾಜಕೀಯ ಕಾರ್ಯಕ್ರಮ ನಡೆಸುವಂತಿಲ್ಲ. ಎಲ್ಲ ಧಾರ್ವಿುಕ, ದೇವಸ್ಥಾನಗಳ ಚಟುವಟಿಕೆಗಳು ಸ್ಥಗಿತವಾಗಿರುತ್ತವೆ. ಆದರೆ ಏ. 20ರಿಂದ ಕೆಲವು ವಲಯಗಳಿಗೆ ವಿನಾಯಿತಿ ಕಲ್ಪಿಸಲಾಗಿದ್ದು ಅವುಗಳನ್ನು ನಿಯಮಗಳ ಕಟ್ಟುನಿಟ್ಟಿನ ಜಾರಿಯೊಂದಿಗೆ ಪಾಲಿಸಬೇಕಾಗುತ್ತದೆ. ಕೆಲಸ ಮಾಡುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೈಯಿಂದ ಮಾಡಿದ ಮುಖಗವಸು ಧರಿಸುವುದು ಕಡ್ಡಾಯವಾಗಿದೆ.

ಕರೊನಾ ವೈರಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ ಪ್ರದೇಶಗಳಲ್ಲಿ ಏ.20ರಿಂದ ಆಯ್ದ ಕೈಗಾರಿಕೆಗಳು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಲಿದೆ. ವಲಸೆ ಕಾರ್ವಿುಕರಿಗೆ ಉದ್ಯೋಗ ಸೃಷ್ಟಿಯೂ ಸರ್ಕಾರದ ಉದ್ದೇಶವಾಗಿದೆ. ಆದರೆ ಕರೊನಾ ಹಾವಳಿ ಹೆಚ್ಚಿರುವ ಹಾಟ್​ಸ್ಪಾಟ್​ಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುತ್ತವೆ. ಇ-ಕಾಮರ್ಸ್ ಕಂಪನಿಗಳ ಆಶಯ: ಲಾಕ್​ಡೌನ್​ನ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳು ಇ-ಕಾಮರ್ಸ್ ಕಂಪನಿಗಳ ಕಾರ್ಯಾಚರಣೆ ಪುನಾರಂಭಕ್ಕೆ ಅನುಮತಿ ನೀಡಿದೆ.

ಈ ಕಂಪನಿಗಳು ಲಾಕ್​ಡೌನ್ ಅವಧಿಯಲ್ಲಿ ಮೂಲಭೂತ ಅಗತ್ಯ ವಸ್ತುಗಳ ಸರಬರಾಜು ಮಾತ್ರ ಮಾಡುತ್ತಿದ್ದವು. ಇದೀಗ ನೀಡಿರುವ ವಿನಾಯಿತಿಗಳ ಬಗ್ಗೆ ಇನ್ನಷ್ಟು ಸ್ಪಷ್ಟನೆ ಕೋರಿ ಕಂಪನಿಗಳ ಅಧಿಕಾರಿಗಳು ಗೃಹ ಸಚಿವಾಲಯವನ್ನು ಸಂರ್ಪಸಿದ್ದಾರೆ. ‘ತೀರಾ ಅಗತ್ಯವಲ್ಲದ ವಸ್ತುಗಳ ಪೂರೈಕೆಗೂ ಅನುಮತಿಯಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಂಗನವಾಡಿ ಓಪನ್: ಸಾಮಾಜಿಕ ಕ್ಷೇತ್ರದಡಿ ಬರುವ ಅಂಗನವಾಡಿ, ಬಾಲಗೃಹ, ಮಾನಸಿಕ ವಿಕಲಚೇತನರು, ವೃದ್ಧಾಶ್ರಮಗಳು, ಅನಾಥಾಶ್ರಮಗಳು ಕಾರ್ಯ ನಿರ್ವಹಿಸಬಹುದಾಗಿದೆ. ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿತರಿಸಬಹುದು.

ಗ್ರಾಮೀಣ ಚಟುವಟಿಕೆಗೆ ಉತ್ತೇಜನ

ಏ.20ರ ನಂತರ ಕೃಷಿ ಮತ್ತು ಸಂಬಂಧಿತ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಪುನಾರಂಭವಾಗಲಿದೆ. ದಿನಗೂಲಿ ಕಾರ್ವಿುಕರು ಮತ್ತು ಇತರರಿಗೆ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶ. ಗ್ರಾಮೀಣ ಪ್ರದೇಶ ಗಳಲ್ಲಿರುವ ಕೈಗಾರಿಕೆಗಳು ಕೂಡ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದರೊಂದಿಗೆ ಕಾರ್ಯಾರಂಭ ಮಾಡಲು ಅನುಮತಿ ಸಲಾಗುತ್ತದೆ. ಹೈವೇ ಧಾಬಾಗಳು, ಲಾರಿ ರಿಪೇರಿ ಅಂಗಡಿಗಳು ತೆರೆಯುತ್ತವೆ. ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಹಿತ ಗ್ರಾಮೀಣ ಭಾಗಗಳಲ್ಲಿರುವ ಕೈಗಾರಿಕೆಗಳು, ರಸ್ತೆಗಳು, ನೀರಾವರಿ ಯೋಜನೆಗಳು, ಕಟ್ಟಡ ಹಾಗೂ ಕೈಗಾರಿಕಾ ಯೋಜನೆಗಳು ಏ.20ರಿಂದ ಕೆಲಸ ನಿರ್ವಹಿಸಬಹುದು. ಕೃಷಿ ಉತ್ಪನ್ನಗಳ ಖರೀದಿ, ಅಧಿಸೂಚಿತ ಮಂಡಿಗಳ ಮೂಲಕ ಮಾರುಕಟ್ಟೆ ಚಟುವಟಿಕೆಗೆ ಅವಕಾಶ. ಮೀನುಗಾರಿಕೆ, ಕೋಳಿ ಸಾಕಣೆ, ಹೈನುಗಾರಿಕೆ, ಹಾಲು ಸರಬರಾಜು ವ್ಯವಸ್ಥೆಗೆ ಕೂಡ ಯಾವುದೇ ಅಡ್ಡಿಯಿರದು. ಚಹಾ, ಕಾಫಿ ಪ್ಲಾಂಟೇಷನ್​ಗಳ ಚಟುವಟಿಕೆಗಳಿಗೂ ಅವಕಾಶ ಇರುತ್ತದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲೂ ಕೆಲಸಗಳನ್ನು ನಡೆಸಬಹುದಾಗಿದೆ. ಈ ಸಂದರ್ಭ ಸಾಮಾಜಿಕ ಅಂತರ ಹಾಗೂ ಮುಖಗವಸು ಧರಿಸುವುದು ಕಡ್ಡಾಯ. ಅದು ರಾಜ್ಯ ಸರ್ಕಾರಗಳ ಹೊಣೆ.

ಡಿಜಿಟಲ್ ಆರ್ಥಿಕತೆ

  • ಸೇವಾ ಕ್ಷೇತ್ರ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಡಿಜಿಟಲ್ ಆರ್ಥಿಕತೆ ಅತ್ಯಗತ್ಯ. ಹೀಗಾಗಿ ಇ-ಕಾಮರ್ಸ್, ಐಟಿ ಮತ್ತು ಐಟಿ-ಅವಲಂಬಿತ ಸೇವೆಗಳು, ಡೇಟಾ ಮತ್ತು ಸರ್ಕಾರಿ ಚಟುವಟಿಕೆಗಳಿಗೆ ಅಗತ್ಯವಾದ ಕಾಲ್ ಸೆಂಟರ್​ಗಳ ಕಾರ್ಯ ನಿರ್ವಹಣೆಗೂ ಅನುಮತಿಸಲಾಗಿದೆ. ಆನ್​ಲೈನ್ ಬೋಧನೆ ಮತ್ತು ದೂರಶಿಕ್ಷಣ ಚಟುವಟಿಕೆಗಳಿಗೂ ಅವಕಾಶವಿದೆ.
  • ಉತ್ಪಾದನಾ ವಲಯ ಭಾರತದ ಜಿಡಿಪಿಗೆ ಶೇ.17ರಷ್ಟು ಕೊಡುಗೆ ನೀಡುತ್ತದೆ ಹಾಗೂ ಈ ಕ್ಷೇತ್ರದ ಕಾರ್ವಿುಕರ ಪ್ರಮಾಣ ದೇಶದ ಒಟ್ಟು ದುಡಿಮೆಗಾರರಲ್ಲಿ ಶೇ.12ರಷ್ಟು ಇರುವುದರಿಂದ ಈ ವಲಯಕ್ಕೆ ವಿನಾಯಿತಿ ನೀಡಲಾಗಿದೆ.
  • ಎಲೆಕ್ಟ್ರಿಷಿಯನ್​ಗಳು, ಪ್ಲಂಬರ್​ಗಳು, ಕಾರ್ಪೆಂಟರ್​ಗಳು ಮತ್ತು ಮೋಟರ್ ಮೆಕ್ಯಾನಿಕ್​ಗಳಿಗೆ ಕೂಡ ಕೆಲಸ ಮಾಡಲು ಅನುಮತಿಸಿದೆ.
  • ಕೊರಿಯರ್ ಸೇವೆಗಳಿಗೆ ಕೂಡ ಅನುಮತಿ ನೀಡಲಾಗಿದೆ.

ಮಾಲೀಕರು ಹೊಣೆ

  • ವಿನಾಯಿತಿ ನೀಡಲಾದ ಕಾರ್ಖಾನೆಗಳು, ಮತ್ತಿತರ ಕಚೇರಿ, ಕೈಗಾರಿಕಾ ಘಟಕಗಳ ಮಾಲಿಕರಿಗೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ
  • ಲಿಫ್ಟ್, ಮೆಟ್ಟಿಲುಗಳು, ವಾಶ್​ರೂಮ್ಳ ನಿರ್ಮಲೀಕರಣ ಸಂಸ್ಥೆಗಳ ಹೊಣೆ
  • ಹೊರಗಡೆಯಿಂದ ಬರುವ ಕಾರ್ವಿುಕರನ್ನು ಕರೆತರಲು ಆಯಾ ಸಂಸ್ಥೆಗಳೇ ವಿಶೇಷ ವಾಹನ ವ್ಯವಸ್ಥೆ ಮಾಡಬೇಕು.
  • ಸಂಸ್ಥೆಗಳೇ ನೌಕರರಿಗೆ ವೈದ್ಯಕೀಯ ವಿಮೆ ಮಾಡಿಸುವುದು ಕಡ್ಡಾಯ
  • ಪಾಳಿಗಳ ನಡುವೆ ಒಂದು ಗಂಟೆಯ ಅಂತರವಿರಬೇಕು. ಊಟದ ವಿರಾಮವನ್ನು ಕೂಡ ವಿಭಾಗಿಸಬೇಕು. ಸಾಮಾಜಿಕ ಅಂತರ ಖಾತರಿಪಡಿಸಲು ಇದು ಅಗತ್ಯ
  • ತಂಬಾಕು ಮತ್ತು ಗುಟ್ಕಾ ಸೇವನೆಗೆ ನಿಷೇಧ
  • ಕಾರ್ಯಾರಂಭ ಮಾಡುವ ಸಂಸ್ಥೆಗಳು ಅದಕ್ಕೂ ಮುನ್ನವೇ ಕೊವಿಡ್-19 ಚಿಕಿತ್ಸೆ ಒದಗಿಸುವ ಸಮೀಪದ ಆಸ್ಪತ್ರೆಯನ್ನು ಗುರುತಿಸಿಕೊಳ್ಳಬೇಕು

ಯಾವುದಕ್ಕೆ ನಿರ್ಬಂಧ?

ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರ. ಭದ್ರತಾ ಉದ್ದೇಶ ಹೊರತುಪಡಿಸಿ ಇತರ ಎಲ್ಲ ರೈಲುಗಳ ಸೇವೆ. ಮೆಟ್ರೋ ರೈಲುಗಳು. ಸಾರ್ವಜನಿಕ ಸಾರಿಗೆಯ ಬಸ್​ಗಳು. ವೈದ್ಯಕೀಯ ಕಾರಣ ಅಥವಾ ಪರಿಷ್ಕೃತ ಮಾರ್ಗದರ್ಶಿಗಳಲ್ಲಿ ನಮೂದಿಸಿದ ಕಾರಣ ಹೊರತುಪಡಿಸಿದಂತೆ ಉಳಿದ ಯಾವುದೇ ಸಂದರ್ಭದಲ್ಲಿ ಅಂತರ್-ಜಿಲ್ಲಾ, ಅಂತರ್-ರಾಜ್ಯ ಓಡಾಟ. ಟ್ಯಾಕ್ಸಿ, ಆಟೋ ರಿಕ್ಷಾ, ಸೈಕಲ್ ರಿಕ್ಷಾ ಮತ್ತು ಕ್ಯಾಬ್​ಗಳ ಸೇವೆ, ಎಲ್ಲ ಶಿಕ್ಷಣ ಸಂಸ್ಥೆ, ತರಬೇತಿ ಹಾಗೂ ಕೋಚಿಂಗ್ ಸಂಸ್ಥೆಗಳು, ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು, ಎಲ್ಲ ಚಿತ್ರಮಂದಿರಗಳು, ಮಾಲ್​ಗಳು, ಶಾಪಿಂಗ್ ಕಾಂಪ್ಲೆಕ್ಸ್​ಗಳು, ಧಾರ್ವಿುಕ-ಪ್ರಾರ್ಥನಾ ಸ್ಥಳಗಳು. ಧಾರ್ವಿುಕ ಸಮಾವೇಶಗಳು, ಅಂತ್ಯಕ್ರಿಯೆಗಳಲ್ಲೂ 20ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ.

ವಿಶೇಷ ವಲಯ

ವಿಶೇಷ ಆರ್ಥಿಕ ವಲಯಗಳು, ಕೈಗಾರಿಕಾ ಎಸ್ಟೇಟ್​ಗಳು ಮತ್ತು ಕೈಗಾರಿಕಾ ಟೌನ್​ಶಿಪ್​ಗಳಲ್ಲಿನ ಉತ್ಪಾದನಾ ಘಟಕಗಳ ಕಾರ್ಯ ನಿರ್ವಹಣೆಗೆ ಅವಕಾಶ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಾದ ಹಾರ್ಡ್ ವೇರ್ ತಯಾರಿಕೆ, ಅಗತ್ಯ ಸಾಮಗ್ರಿಗಳು ಮತ್ತು ಪ್ಯಾಕೇಜಿಂಗ್ ಘಟಕಗಳಿಗೂ ಅವಕಾಶ, ಕಲ್ಲಿದ್ದಲು, ಖನಿಜ ಮತ್ತು ತೈಲ ಉತ್ಪಾದನೆಗೆ ಅನುಮತಿ, ಭಾರತೀಯ ರಿಸರ್ವ್ ಬ್ಯಾಂಕ್, ಇತರ ಬ್ಯಾಂಕ್​ಗಳು, ವಿಮಾ ಕಂಪನಿಗಳು ಮತ್ತು ಸೆಬಿ ಅಧಿಸೂಚಿತ ಮಾರಕಟ್ಟೆಗಳು ಕೂಡ ತೆರೆದಿರುತ್ತವೆ. ಔಷಧ ಹಾಗೂ ವೈದ್ಯಕೀಯ ಉಪಕರಣ ತಯಾರಿಕೆ ಘಟಕಗಳನ್ನೂ ತೆರೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net