

ಬೆಂಗಳೂರು: ರಾಜ್ಯದಲ್ಲಿ ಬೇರು ವಿಸ್ತರಿಸಿರುವ ಡ್ರಗ್ಸ್ ಮಾಫಿಯಾವನ್ನು ಹೆಡೆಮುರಿ ಕಟ್ಟಲು ಸರ್ಕಾರ ಪೊಲೀಸರಿಗೆ ಗೂಂಡಾ ಕಾಯ್ದೆ ಮಾದರಿಯಲ್ಲಿ ಡ್ರಗ್ಸ್ ದಂಧೆಕೋರರ ವಿರುದ್ಧ ‘ಮಾದಕ ವಸ್ತು ಸಾಗಣೆ ಮತ್ತು ಮಾರಾಟ ನಿರ್ಬಂಧ’ (ಪಿಐಟಿ- ಎನ್ಡಿಪಿಎಸ್ ಆಕ್ಟ್ 1998) ಕಾಯ್ದೆ ಪ್ರಯೋಗಿಸುವ ಅಧಿಕಾರ ನೀಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಈ ಕಾಯ್ದೆಯಡಿ ನೈಜೀರಿಯಾದ ವೃತ್ತಿಪರ ಡ್ರಗ್ ಪೆಡ್ಲರ್ ಮಕುಕೊ ಚುಕ್ವಾಕ ಮೌಲೊಕ್ವಾ ಅಲಿಯಾಸ್ ಹೆನ್ರಿ (31) ಎಂಬಾತನನ್ನು ಬಂಧಿಸಿದ್ದಾರೆ.
ಈ ಕಾಯ್ದೆಯಡಿ, ಬಂಧಿತನಿಗೆ 1-2 ವರ್ಷ ಜೈಲುವಾಸವಿರುತ್ತದೆ. ನ್ಯಾಯಾಧೀಶರ ಮಾರ್ಗದರ್ಶಕ ಮಂಡಳಿಯಲ್ಲಿ ವಕೀಲರನ್ನು ನೇಮಿಸಿಕೊಳ್ಳದೆ ಸ್ವಂತಃ ಆರೋಪಿ ಅಥವಾ ಆತನ ಸಂಬಂಧಿಕರು ಅಹವಾಲು ಸಲ್ಲಿಸಬಹುದು. 1 ವರ್ಷ ಜಾಮೀನು ಸಿಗದ ಕಾರಣ ದಂಧೆಕೋರರಿಗೆ ಕಡಿವಾಣ ಬೀಳಲಿದೆ ಎಂಬುದು ಪೊಲೀಸರ ಆಶಯ.
ಈ ಮೊದಲು ಮಾದಕವಸ್ತು ಕಾಯ್ದೆಯಡಿ ಬಂಧಿತರಾದವರು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದು ಹಳೇ ಚಾಳಿ ಶುರು ಮಾಡುತ್ತಿದ್ದರು. ಬೆಂಗಳೂರಿನ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ರೌಡಿಗಳನ್ನು ಮಟ್ಟಹಾಕಲು ಗೂಂಡಾ ಕಾಯ್ದೆಯಡಿ ಎಫ್ಐಆರ್ ಮಾಡುತ್ತಿದ್ದಾರೆ. ಇದೇ ರೀತಿ, ವೃತ್ತಿಪರ ಡ್ರಗ್ಸ್ ಪೆಡ್ಲರ್ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದಾಗ 1988ರಲ್ಲೇ ಕೇಂದ್ರ ಜಾರಿಗೊಳಿಸಿರುವ ಮಾದಕ ಮತ್ತು ಅಮಲು ಭರಿಸುವ ವಸ್ತುಗಳ ಮಾರಾಟ, ಸಾಗಣೆ ನಿರ್ಬಂಧ ಕಾಯ್ದೆ ಗಮನಕ್ಕೆ ಬಂದಿದೆ. ಆದರೆ, ಈ ಕಾಯ್ದೆ ಪ್ರಕಾರ ಆರೋಪಿ ಬಂಧನಕ್ಕೆ ಆದೇಶ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಂದಿದ್ದವು. ಸಂದೀಪ್ ಪಾಟೀಲ್ ಈ ಅಂಶವನ್ನು ಸರ್ಕಾರದ ಗಮನಕ್ಕೆ ತಂದು ಕಾಯ್ದೆಗೆ ಮರುರೂಪ ನೀಡಿದ್ದಾರೆ.