

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರ್ಚ್ 16ರವರೆಗೆ 21.26 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನಿವ್ವಳ ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಶೇ. 13.13ರಷ್ಟು ಏರಿಕೆ ಎಂದು ಕೇಂದ್ರ ಸರ್ಕಾರ ಸೋಮವಾರ ಅಂಕಿಅಂಶ ಬಿಡುಗಡೆ ಮಾಡಿದೆ. ಹೆಚ್ಚಿನ ಮುಂಗಡ ತೆರಿಗೆ ಸಂಗ್ರಹದಿಂದ ಈ ಏರಿಕೆ ಸಾಧ್ಯವಾಗಿದೆ.
ಈ ವರ್ಷದಲ್ಲಿ ಸರ್ಕಾರ ನಾಲ್ಕು ಕಂತುಗಳಲ್ಲಿ 10.44 ಲಕ್ಷ ಕೋಟಿ ರೂ. ಮುಂಗಡ ತೆರಿಗೆಯನ್ನು ಸಂಗ್ರಹಿಸಿದ್ದು, ಕಳೆದ ವರ್ಷ ಸಂಗ್ರಹಿಸಿದ್ದ 9.11 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಇದು ಶೇ. 14.62ರಷ್ಟು ಏರಿಕೆಯಾಗಿದೆ. ಮುಂಗಡ ತೆರಿಗೆ ಪಾವತಿಯ ಕೊನೇ ಕಂತನ್ನು ಕಟ್ಟಲು ಮಾ. 15 ಕೊನೇ ದಿನವಾಗಿತ್ತು. ವಾಣಿಜ್ಯ ಕಂಪನಿಗಳ (ಕಾರ್ಪೆರೇಟ್) ವಿಭಾಗದಲ್ಲಿ ಮುಂಗಡ ತೆರಿಗೆ ಸಂಗ್ರಹ 7.57 ಲಕ್ಷ ಕೋಟಿ ರೂ. ಆಗಿ ಶೇ. 12.54ರಷ್ಟು ಹೆಚ್ಚಳ ದಾಖಲಿಸಿದ್ದು, ನಾನ್-ಕಾರ್ಪೆರೇಟ್ ಕಂಪನಿಗಳ ಮುಂಗಡ ತೆರಿಗೆ ಸಂಗ್ರಹ 2.87 ಲಕ್ಷ ಕೋಟಿ ರೂ. ಆಗಿ ಶೇ. 20.47ರಷ್ಟು ಬೆಳವಣಿಗೆ ದಾಖಲಿಸಿದೆ.
ಪಾನೀಯಗಳು, ಖಾದ್ಯ ತೈಲ ಮತ್ತಿತರ ತಯಾರಿಸಿದ ಆಹಾರ ಪದಾರ್ಥಗಳ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಫೆಬ್ರವರಿ ತಿಂಗಳಲ್ಲಿ ದೇಶದ ಸಗಟು ಹಣದುಬ್ಬರ ಶೇ.2.38ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರ ಜನವರಿಯಲ್ಲಿ ಶೇ. 2.31 ಇತ್ತು. 2024ರ ಫೆಬ್ರವರಿಯಲ್ಲಿ ಇದು ಶೇ. 0.2ರಷ್ಟಿತ್ತು. ತಯಾರಿಸಿದ ಆಹಾರ ಪದಾರ್ಥಗಳ ಬೆಲೆ ಶೇ. 11.06ರಷ್ಟು, ಸಸ್ಯಜನ್ಯ ಖಾದ್ಯ ತೈಲದ ಬೆಲೆ ಶೇ. 33.59ರಷ್ಟು ಮತ್ತು ಪಾನೀಯಗಳ ಬೆಲೆ ಶೇ. 1.66ರಷ್ಟು ಏರಿಕೆಯಾಗಿದೆ. ಆದರೆ, ತರಕಾರಿ ಬೆಲೆ ಕಡಿಮೆಯಾಗಿದೆ. ಆಲೂಗಡ್ಡೆ, ಹಾಲಿನ ಬೆಲೆ ಇಳಿಕೆಯಾಗಿದ್ದರೆ, ಹಣ್ಣು, ಈರುಳ್ಳಿ ಬೆಲೆ ಏರಿಕೆಯಾಗಿದೆ. ಇಂಧನ, ವಿದ್ಯುತ್ ಬೆಲೆ ಇಳಿದಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ (ಶೇ. 3.61) ಇಳಿದಿದೆ ಎಂದು ಬುಧವಾರ ಕೇಂದ್ರ ಸರ್ಕಾರ ತಿಳಿಸಿತ್ತು.
ಜಾಗತಿಕ ಅನಿಶ್ಚಿತತೆ ಮತ್ತು ಪೆಟ್ರೋಲಿಯಂ ದರಗಳ ಏರಿಳಿತದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ದೇಶದ ರಫ್ತು ಪ್ರಮಾಣ 36.91 ಶತಕೋಟಿ ಡಾಲರ್ಗೆ ಇಳಿದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಪ್ರಮಾಣ 41.41 ಶತಕೋಟಿ ಡಾಲರ್ನಷ್ಟಿತ್ತು. ರಫ್ತು ಕುಸಿಯುತ್ತಿರುವುದು ಇದು ಸತತ ನಾಲ್ಕನೇ ತಿಂಗಳು. ಆದರೆ, ದೇಶದ ಆಮದು ಪ್ರಮಾಣ ಫೆಬ್ರವರಿಯಲ್ಲಿ 50.96 ಶತಕೋಟಿ ಡಾಲರ್ಗೆ ಇಳಿದ ಕಾರಣದಿಂದ ವಿತ್ತೀಯ ಕೊರತೆ 14.05 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ.