

Ranya Rao: 14 ಕೆಜಿ ಚಿನ್ನದ ಬಿಸ್ಕೆಟ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಡಿ ಬಂಧಿತರಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್, ಸದ್ಯ 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ತನಿಖೆಯನ್ನು ಸಿಐಡಿಗೂ ಒಪ್ಪಿಸಲಾಗಿದ್ದು, ಪ್ರಸ್ತುತ ಸಿಬಿಐ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಈ ಮಧ್ಯೆ ವಿಚಾರಣೆಗೆ ಹಾಜರಾಗಿದ್ದ ರನ್ಯಾ ರಾವ್ ಪತಿಯ ಹೇಳಿಕೆಗಳನ್ನು ಕೋರ್ಟ್ ಆಲಿಸಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ, ತಮ್ಮನ್ನು ಬಂಧನದಿಂದ ಮುಕ್ತಿಗೊಳಿಸುವಂತೆ ವಿನಾಯಿತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ (ಮಾ.11) ಹೈಕೋರ್ಟ್ ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ.
ಇನ್ನು ಈ ಪ್ರಕರಣದಲ್ಲಿ ಬಂಧಿತರಾಗಿರುವ ಹುಕ್ಕೇರಿ ಪರ ವಕೀಲರಾದ ಪ್ರಭುಲಿಂಗ ನವದಗಿ ಅವರು, "ನಮ್ಮ ಕಕ್ಷಿದಾರರು ಕೋರಿದ ವಿನಾಯಿತಿಯನ್ನು ಪರಿಗಣಿಸಬೇಕು. ನವೆಂಬರ್‌ನಲ್ಲಿ ರನ್ಯಾ ರಾವ್ ಅವರನ್ನು ವಿವಾಹವಾದರು. ಒಂದಷ್ಟು ವಿಷಯಗಳಿಂದ ಇಬ್ಬರೂ ಅನಧಿಕೃತವಾಗಿ ಡಿಸೆಂಬರ್ನಲ್ಲಿ ಬೇರ್ಪಟ್ಟರು" ಎಂದು ಕೋರ್ಟ್ ಮುಂದೆ ಹೇಳಿದರು.
ಈ ಮಧ್ಯೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಕೀಲ ಮಧು ರಾವ್ ಮುಂದಿನ ಸೋಮವಾರ (ಮಾ.24) ತಮ್ಮ ಆಕ್ಷೇಪಣೆಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ನ್ಯಾಯಾಲಯ ಮುಂದಿನ ವಿಚಾರಣೆವರೆಗೂ ಹುಕ್ಕೇರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಮಾರ್ಚ್ 24ರಂದು ಡಿಆರ್‌ಐ ತನ್ನ ಆಕ್ಷೇಪಣೆಯನ್ನು ಸಲ್ಲಿಸುವವರೆಗೆ ಈ ಆದೇಶ ಜಾರಿಯಲ್ಲಿರುತ್ತವೆ ಎಂದು ಹೈಕೋರ್ಟ್ ತಿಳಿಸಿದೆ.
ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್)