

ಕಠ್ಮಂಡು: ಚೀನಾದ ತಾಳಕ್ಕೆ ಕುಣಿಯುತ್ತ ಭಾರತದ ವಿರುದ್ಧವೇ ತಿರುಗಿಬಿದ್ದಿದ್ದ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಸದ್ಯ ಬುಧವಾರದವರೆಗೆ ತಮ್ಮ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ.
ಗಡಿ ವಿವಾದ, ಭಾರತದೊಂದಿಗೆ ಭಿನ್ನಾಭಿಪ್ರಾಯ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರಧಾನಿ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಓಲಿಯ ಭವಿಷ್ಯ ಬುಧವಾರ ಹೊರಬೀಳುವ ಸಾಧ್ಯತೆ ಇದೆ.
ಇವರನ್ನು ದೇಶದ ಉನ್ನತ ಹುದ್ದೆಯಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸುವ ಮಹತ್ವದ ಸಭೆ ಮೂರು ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ.
ಇವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸಲು ಇಂದು ನಡೆಯಬೇಕಿದ್ದ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ ಮಹತ್ವದ ಸಭೆ ಬುಧವಾರದ ತನಕ ಮುಂದೂಡಲ್ಪಟ್ಟಿದೆ.
ನನ್ನನ್ನು ಪದಚ್ಯುತಿಗೊಳಿಸಲು ಭಾರತ ಷಡ್ಯಂತ್ರ ಹೂಡಿದೆ ಎಂಬ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆ ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಇವರ ಹೇಳಿಕೆಗೆ ನೇಪಾಳದ ಆಡಳಿತ ಪಕ್ಷದಲ್ಲೇ ತೀವ್ರ ಅಸಮಾಧಾನ ಭುಗಿಲೆದ್ದಿದ್ದು, ಇಂತಹ ಹೇಳಿಕೆ ನೀಡುವ ಮೂಲಕ ಪ್ರಧಾನಿ ನೇಪಾಳದ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ತೀವ್ರ ಧಕ್ಕೆ ತಂದಿದ್ದಾರೆ ಎಂದು ಸಹವರ್ತಿಗಳೇ ಆರೋಪಿಸಿದ್ದರು. (ಏಜೆನ್ಸೀಸ್)