

ನವದೆಹಲಿ: ನೇಪಾಳದ ದಿನದಿನದ ಬೆಳವಣಿಗೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಇಲ್ಲಿಯ ಗಡಿಯಲ್ಲಿರುವ ಕೆಲವು ಹಳ್ಳಿಗಳು ರಾತ್ರೋರಾತ್ರಿ ಚೀನಾದ ಪಾಲಾಗಿರುವ ಸುದ್ದಿ ಎಲ್ಲೆಡೆ ಕೇಳಿಬಂದಿವೆ. ಗಡಿಯಲ್ಲಿರುವ ಆಯಕಟ್ಟಿನ ಗ್ರಾಮಗಳನ್ನು ಕಬಳಿಸುವ ಮೂಲಕ ಇಡೀ ನೇಪಾಳವನ್ನೇ ಗುಳುಂ ಮಾಡುವ ಹುನ್ನಾರ ಇದು ಎನ್ನುವುದನ್ನು ಇದಾಗಲೇ ಅಂತಾರಾಷ್ಟ್ರೀಯ ಕೆಲವು ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತಕ್ಕೆ ಅತ್ಯಂತ ಸ್ನೇಹಪರ ರಾಷ್ಟ್ರವಾಗಿದ್ದ ನೇಪಾಳ, ಭಾರತದ ವಿರುದ್ಧ ಸಂಚು ಹೂಡುತ್ತಾ, ಈ ಪರಿಯಲ್ಲಿ ವಿರೋಧ ಕಟ್ಟಿಕೊಳ್ಳುವ ಮಟ್ಟಿಗೆ ಬೆಳೆದುನಿಂತಿದ್ದೇಕೆ ಎಂಬುದು ಭಾರತದ ಪಾಲಿಗೆ ಬಹು ಅಚ್ಚರಿಯ ವಿಷಯವಾಗತೊಡಗಿತು. ಇದರ ಹಿಂದಿನ ಶಕ್ತಿ ಯಾವುದು ಎಂಬ ಬಗ್ಗೆ ಭಾರತದ ಗುಪ್ತಚರ ಇಲಾಖೆ ಜಾಡು ಹಿಡಿದು ಹೊರಟಾಗ ಕಂಡಿದ್ದು ಚೀನಾದ ಓರ್ವ ಹೆಣ್ಣು!
ಹೌದು. ನೇಪಾಳ ತನ್ನ ನಕ್ಷೆಯನ್ನೇ ಬದಲಿಸಿ ದಿನದಿಂದ ದಿನಕ್ಕೆ ಭಾರತದ ವೈರತ್ವ ಕಟ್ಟಿಕೊಳ್ಳುವ ಹಿಂದಿರುವುದು ಚೀನಾದ ಸುಂದರಿ ಎನ್ನುವುದು ಭಾರತದ ಗುಪ್ತಚರ ಇಲಾಖೆಯ ವಾದ. 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುವುದಕ್ಕೂ ಈ ಸುಂದರಿಯೇ ಕಾರಣ ಎನ್ನಲಾಗಿದೆ.
ಇತಿಹಾಸವನ್ನು ನೋಡಿದಾಗ, ನೇಪಾಳ ಭಾರತದ ರಾಜರ ಆಡಳಿತಕ್ಕೆ ಒಳಪಟ್ಟಿತ್ತು. ಮೊನ್ನೆ ಮೊನ್ನೆವರೆಗೂ ನೇಪಾಳದಲ್ಲಿ ರಾಜಾಡಳಿತವೇ ಇತ್ತು. ಹಿಂದೂ ರಾಷ್ಟ್ರ ಎಂದು ಕರೆಸಿಕೊಂಡಿದ್ದ ಪ್ರಪಂಚದ ಏಕೈಕ ದೇಶವಾಗಿತ್ತು ಇದು.
ಚೀನಾದ ಕುತಂತ್ರವೋ ಏನೋ ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಜಾಪ್ರಭುತ್ವದ ಹೋರಾಟ ಶುರುವಾಗತೊಡಗಿತು. ಆನಂತರ ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ಈಗ ಅಲ್ಲಿ ಆಡಳಿತ ನಡೆಸುತ್ತಿರುವುದು ಕಮ್ಯುನಿಸ್ಟ್ ಪಾರ್ಟಿ ಸರ್ಕಾರ. ಇದರ ಹಿಂದಿರುವುದೂ ಚೀನಾದ ಕುತಂತ್ರ ಬುದ್ಧಿಯೇ ಎಂದು ಹೇಳಲಾಗುತ್ತಿದೆ. ಇದೀಗ ನೇಪಾಳ ಚೀನಾದ ಸಂಪೂರ್ಣ ಕೈಗೊಂಬೆಯಾಗಿದೆ.
ಅಷ್ಟಕ್ಕೂ ಈ ಸುಂದರಿ ಯಾರು? ಇಡೀ ನೇಪಾಳವನ್ನೇ ಭಾರತದ ವಿರುದ್ಧ ಎತ್ತಿಕಟ್ಟಲು ಆಕೆಗೆ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ:
ಈ ಸುಂದರಿ ಹೆಸರು ಹೂ ಯಾಂಕಿ. ಸದ್ಯ ಈಕೆಯ ವರ್ಷ 50 ಆದರೂ ಯಾರನ್ನಾದರೂ ಮೊದಲ ನೋಟದಲ್ಲೇ ಮರುಳು ಮಾಡೋ ಸೌಂದರ್ಯ. ಈಕೆ ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಿದ್ದಂತೆಯೇ ನೇಮಕಗೊಂಡಿದ್ದು ಚೀನಾದ ವಿದೇಶಾಂಗ ಇಲಾಖೆಗೆ. ಕೆಲವು ವರ್ಷಗಳ ನಂತರ ಚಾಲಾಕಿ ಹೂ ಯಾಂಕಿ ಅಲ್ಲಿಂದ ನೇರವಾಗಿ ಕಾಲಿಟ್ಟಿದ್ದು ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ಸೆಕ್ರೆಟರಿಯಾಗಿ. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಸೇನಾ ಆಡಳಿತವಿತ್ತು. ಆಗಿನ ಪಾಕಿಸ್ತಾನದ ಅಧ್ಯಕ್ಷ ಆಗಿದ್ದುದು ಪರ್ವೇಜ್ ಮುಷ್ರಫ್.
ಇದಾಗಲೇ ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹೂ ಯಾಂಕಿ, ಪಾಕಿಸ್ತಾನವನ್ನೇ ಭಾರತದ ವಿರುದ್ಧ ಎತ್ತಿಕಟ್ಟಿರುವ ಗುಮಾನಿಗಳಿವೆ. ಇದರ ಫಲಿತಾಂಶವೇ ಕಾರ್ಗಿಲ್ ಯುದ್ಧ. ಅಲ್ಲಿಯವರೆಗೂ ಇವಳ ತಾಳಕ್ಕೆ ಕುಣಿದ ಮುಷ್ರಫ್, ಕಾರ್ಗಿಲ್ ಯುದ್ಧದ ನಂತರ ಭಾರಿ ಮುಖಭಂಗ ಅನುಭವಿಸಿದ್ದೂ ಅಲ್ಲದೇ ಆ ನಂತರದ ದಿನಗಳಲ್ಲಿ ದೇಶಭ್ರಷ್ಟನಾಗಬೇಕಾದ ಸ್ಥಿತಿಯೂ ಬಂದಿದ್ದು ಇದೀಗ ಇತಿಹಾಸ.
ಇದೇ ಸುಂದರಿಯನ್ನು 2018ರ ಡಿಸೆಂಬರ್ ತಿಂಗಳಿನಲ್ಲಿ ಚೀನಾ ಕಮ್ಯುನಿಸ್ಟ್ ಸರ್ಕಾರ ನೇರವಾಗಿ ನೇಪಾಳದಲ್ಲಿ ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿತು.
ಎಲ್ಲಾ ರಾಯಭಾರಿಗಳಂತೆ ಅಲ್ಲದ ಹೂ ಯಾಂಕಿ, ಅಲ್ಲಿಯ ರಾಜಕಾರಣಿಗಳು ಹಾಗೂ ಕಮ್ಯೂನಿಸ್ಟ್ ಪಕ್ಷದ ಯೂತ್ ವಿಂಗ್‌ನ ಸದಸ್ಯರ ಜತೆ ಸಲುಗೆ ಇಟ್ಟುಕೊಂಡು, ಪಕ್ಷದ ವ್ಯವಹಾರಗಳಲ್ಲಿಯೂ ಕೈಯಾಡಿಸುವಷ್ಟು ಬೆಳೆದಳು. ಈ ಸಮಯದಲ್ಲಿ ಆಡಳಿತದಲ್ಲಿರು ನೇಪಾಳಿ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಉಂಟಾದ ಆಂತರಿಕ ಜಗಳವನ್ನು ಚೀನಾ ಸಹಾಯದಿಂದ ಪರಿಹರಿಸುವ ಮೂಲಕ ಈಗಿನ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಖುರ್ಚಿಯನ್ನು ಭದ್ರಗೊಳಿಸುವಲ್ಲಿ ಯಶಸ್ವಿಯಾದಳು. ಇದೇ ಕಾರಣಕ್ಕೆ ಓಲಿ ಕೂಡ ಈಕೆಯ ಕೈವಶವಾಗಿರುವ ಗುಮಾನಿ ಇದೆ.
ನೇಪಾಳದ ಮಾಧ್ಯಮಗಳಲ್ಲಿಯೂ ಮಿತ್ರರನ್ನು ಸಂಪಾದಿಸಿಕೊಂಡ ಈಕೆ, ಅಲ್ಲಿ ಭಾರಿ ಪ್ರಚಾರ ಗಳಿಸಿದಳು. ಸಾಮಾಜಿಕ ಜಾಲತಾಣಗಳಲ್ಲಿಯೂ ಈಕೆಯೇ ಮಿಂಚಿಂಗ್. ನೇಪಾಳದ ಶಾಲೆಗಳಲ್ಲಿ ಚೀನಿಭಾಷೆಯ ಪಠ್ಯವನ್ನು ಕಡ್ಡಾಯಗೊಳಿಸಿರುವ ಹಿಂದಿನ ತಲೆಯೂ ಈಕೆಯದ್ದೇ.
ಭಾರತ ತನ್ನ ಸೇನಾ ಅನುಕೂಲಕ್ಕಾಗಿ ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದ ಸಮಯದಲ್ಲಿ ಇಲ್ಲಿಯವರೆಗೆ ಚಕಾರ ಎತ್ತದಿದ್ದ ನೇಪಾಳದ ಬುದ್ಧಿ ಕೆಡಿಸಿರುವ ಈಕೆ, ನೇಪಾಳದ ಕಮ್ಯೂನಿಸ್ಟ್ ಪಕ್ಷದ ಯೂತ್ ವಿಂಗ್‌ನ ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿದಳು. ಇದರ ಬೆನ್ನತ್ತಿ ಹೋದ ಭಾರತದ ಗುಪ್ತಚರ ಇಲಾಖೆಗೆ ಈ ಎಲ್ಲಾ ಬೆಳವಣಿಗೆಗಳ ಹಿಂದಿನ ಶಕ್ತಿ ಓರ್ವ ಹೆಣ್ಣು ಎನ್ನುವುದು ತಿಳಿದುಬಂದಿದೆ.
ಅಲ್ಲಿ ಮುಶ್ರಫ್‌ಗೆ ಆದ ಗತಿಯೇ ಇಲ್ಲಿ ಕೆ.ಪಿ.ಓಲಿಗೂ ಮುಂದೆ ಕಾದಿರಬಹುದು ಎನ್ನುವುದು ತಜ್ಞರ ವಿಶ್ಲೇಷಣೆ.. ಮತ್ತೆ ಈಗ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ ಒಡೆದು ಹೋಳಾಗುವ ಹಂತಕ್ಕೆ ತಲುಪಿದೆ ಎನ್ನುತ್ತಾರೆ ಅವರು. (ಏಜೆನ್ಸೀಸ್)