18 ಲಕ್ಷ ರೂ. ಖರ್ಚು ಮಾಡಿ ಮದ್ವೆ ಮಾಡಿಕೊಟ್ಟರೂ ಗಂಡನ ಹಣದಾಹಕ್ಕೆ ಮಗಳು ಬಲಿ: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ

Dowry
Published on

ನೆಲಮಂಗಲ: ಮಾರಕಾಸ್ತ್ರಗಳಿಂದ ಮಹಿಳೆಯೊಬ್ಬಳನ್ನು ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ನಡೆದಿದೆ.

ಶ್ರುತಿ (29) ಕೊಲೆಯಾದ ಮಹಿಳೆ. ವರದಕ್ಷಿಣೆಗಾಗಿ ಪತಿ ಕೃಷ್ಣಮೂರ್ತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಮದುವೆಯಾದ ಮೂರು ತಿಂಗಳವರೆಗೂ ಶ್ರುತಿಯ ವೈವಾಹಿಕ ಜೀವನ ಸುಸೂತ್ರವಾಗಿತ್ತು. ಆದರೆ, ಮೂರು ತಿಂಗಳ ನಂತರದ ಗಂಡನ ಅಸಲಿ ಮುಖವಾಡ ಒಂದೊಂದಾಗಿ ಕಳಚಲು ಆರಂಭವಾಯಿತು. ಹಣದಾಹಿಯಾಗಿದ್ದ ಕೃಷ್ಣಮೂರ್ತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಅದಕ್ಕೆ ಶ್ರುತಿ ಒಪ್ಪದಿದ್ದಾಗ ಕಿರುಕುಳ ನೀಡುತ್ತಿದ್ದ.

ಹಣದ ವಿಚಾರವಾಗಿ ದಂಪತಿ ನಡುವೆ ನಡೆದ ವಾಗ್ವಾದ, ತಾರಕಕ್ಕೇರಿತ್ತು. ಉದ್ರಿಕ್ತ ಕೃಷ್ಣಮೂರ್ತಿ ಮಾರಕಾಸ್ತ್ರ ತೆಗೆದುಕೊಂಡು ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ, ಇದೀಗ ಪರಾರಿಯಗಿದ್ದಾನೆ. ಘಟನೆಯ ಬೆನ್ನಲ್ಲೇ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಮೃತ ಶ್ರುತಿ ಅವರ ಅತ್ತೆ ಲಕ್ಷ್ಮಮ್ಮ, ಮಾವ ಬೈಲಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೃಷ್ಣಮೂರ್ತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ 18 ಲಕ್ಷ ವೆಚ್ಚದಲ್ಲಿ ಶ್ರುತಿ ಪಾಲಕರು ಮದುವೆ ಮಾಡಿದ್ದರು. ಅದರೂ ಕೃಷ್ಣಮೂರ್ತಿಯ ಹಣ ದಾಹ ಕಡಿಮೆ ಆಗಿರಲಿಲ್ಲ.

ಅತ್ತೆ ಲಕ್ಷ್ಮಮ್ಮ, ಮಾವ ಬೈಲಪ್ಪ, ಅಳಿಯ ಕೃಷ್ಣಮೂರ್ತಿ ಮತ್ತು ಆತನ ಹಿರಿಯ ಸಹೋದರ ರವಿಕುಮಾರ್ ಕೊಲೆಗೈದಿದ್ದಾರೆ ಎಂದು ಶ್ರುತಿ ಪಾಲಕರು ಆರೋಪಿಸಿದ್ದಾರೆ. ಶವಗಾರದ ಬಳಿ ಶ್ರುತಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಶವಗಾರಕ್ಕೆ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಭೇಟಿ ನೀಡಿ ಶ್ರುತಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಈ ವೇಳೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮೃತಳ ಕುಟುಂಬಸ್ಥರು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net