Vande Mataram | ವಂದೇ ಮಾತರಂದಲ್ಲಿನ ದುರ್ಗಾದೇವಿಯ ಉಲ್ಲೇಖ ತೆಗೆದ ನೆಹರು ಐತಿಹಾಸಿಕ ಪಾಪ ಮಾಡಿದ್ದಾರೆ: ಬಿಜೆಪಿ ವಕ್ತಾರ ಕೇಶವನ್

Keshavan
Published on

ದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಕಾಂಗ್ರೆಸ್, ವಂದೇ ಮಾತರಂ (Vande Mataram) ಗೀತೆಯ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ದುರ್ಗಾದೇವಿಯ ಉಲ್ಲೇಖಗಳನ್ನು ತೆಗೆದುಹಾಕುವ ಮೂಲಕ ಕೋಮುವಾದಿ ಕಾರ್ಯಸೂಚಿಗೆ ಸಹಕರಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಶುಕ್ರವಾರ (ನ 7) ಆರೋಪಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಶವನ್​, ನೆಹರೂರನ್ನು ಟೀಕಿಸಿ, ನೇತಾಜಿ ಸುಭಾಷ್ ಬೋಸ್ ಅವರಿಗೆ 1937 ಸೆಪ್ಟೆಂಬರ್ ಮತ್ತು ಅಕ್ಟೋಬರ್​​ನಲ್ಲಿ ಬರೆದ ಪತ್ರಗಳನ್ನು ಹಂಚಿಕೊಂಡರು.

ವಂದೇ ಮಾತರಂ ಹಿನ್ನೆಲೆ ಮುಸ್ಲಿಮರನ್ನು ಕೆರಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದರು. 1937ರಲ್ಲಿ ದುರ್ಗಾ ದೇವಿಯನ್ನು ಸ್ತುತಿಸುವ ಚರಣಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಯಿತು. ಈ ವಿಭಜನೆ ಮುಂದೆ ರಾಷ್ಟ್ರದ ವಿಭಜನೆಯ ಬೀಜಗಳನ್ನು ಬಿತ್ತಿತು. ಇದನ್ನೆಲ್ಲಾ ಇಂದಿನ ಪೀಳಿಗೆ ಅರ್ಥಮಾಡಿಕೊಳ್ಳುವುದು ಮುಖ್ಯ, ವಿಭಜಕ ಚಿಂತನೆ ಇಂದಿಗೂ ಸವಾಲಾಗಿಯೇ ಉಳಿದಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಇಂದು, 'ವಂದೇ ಮಾತರಂ' ರಚನೆಯ 150 ನೇ ವಾರ್ಷಿಕೋತ್ಸವದಂದು, ದೇಶಾದ್ಯಂತ ಅದರ ಪೂರ್ಣ ಆವೃತ್ತಿಯ ಸಾಮೂಹಿಕ ಪಠಣದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅದ್ಭುತವಾದ ವಂದೇ ಮಾತರಂ ನಮ್ಮ ರಾಷ್ಟ್ರದ ಏಕತೆ ಮತ್ತು ಒಗ್ಗಟ್ಟಿನ ಧ್ವನಿಯಾಯಿತು, ನಮ್ಮ ಮಾತೃಭೂಮಿಯನ್ನು ಆಚರಿಸಿತು, ರಾಷ್ಟ್ರೀಯತಾವಾದಿ ಮನೋಭಾವವನ್ನು ಹುಟ್ಟುಹಾಕಿತು ಮತ್ತು ದೇಶಭಕ್ತಿಯನ್ನು ಬೆಳೆಸಿತು. ಆದರೆ ಕಾಂಗ್ರೆಸ್ ಹಾಡನ್ನು ಧರ್ಮದೊಂದಿಗೆ ಜೋಡಿಸುವ ಐತಿಹಾಸಿಕ ಪಾಪ ಮಾಡಿತು ಎಂದರು.

ಇಂದಿನ ಕಾರ್ಯಕ್ರಮ

ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಷಪೂರ್ತಿ ನಡೆಯುವ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, 'ವಂದೇ ಮಾತರಂ' ನಮಗೆ ಹೊಸ ಸ್ಫೂರ್ತಿ ನೀಡುತ್ತದೆ ಎಂದರು.

ಇಂದು ನಾವು ವಂದೇ ಮಾತರಂ ಗೀತೆಯ 150 ವರ್ಷಗಳನ್ನು ಆಚರಿಸುತ್ತಿದ್ದು, ಇದು ದೇಶದ ಜನರಿಗೆ ಹೊಸ ಚೈತನ್ಯ ತುಂಬುತ್ತದೆ, ನವೆಂಬರ್ 7 ಐತಿಹಾಸಿಕ ದಿನವಾಗಿದ್ದು. 150 ವರ್ಷಗಳು ತುಂಬಿದ ಈ ಸಂಭ್ರಮ ಕೋಟ್ಯಂತರ ಭಾರತೀಯರಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಎನ್ನುತ್ತಾ, ದೇಶದ ನಾಗರಿಕರಿಗೆ ಶುಭಾಶಯ ತಿಳಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net