ವಂದೇ ಮಾತರಂ ನಮಗೆಲ್ಲಾ ಸದಾ ಸ್ಫೂರ್ತಿ ನೀಡುತ್ತದೆ : ಪ್ರಧಾನಿ ನರೇಂದ್ರ ಮೋದಿ | Narendra Modi

Narendra Modi
Published on

ದೆಹಲಿ: ವಂದೇ ಮಾತರಂ ಎಂಬ ಪದ ನಮ್ಮ ವರ್ತಮಾನದಲ್ಲಿ ಆತ್ಮವಿಶ್ವಾಸವನ್ನು ತುಂಬುಲಿದ್ದು, ನಾವು ಸಾಧಿಸಲಾಗದ ಯಾವ ಗುರಿಗಳು ಇಲ್ಲ ಎನ್ನುವ ಧೈರ್ಯವನ್ನು ಈ ಗೀತೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ಶುಕ್ರವಾರ (ನ 7) ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಷಪೂರ್ತಿ ನಡೆಯುವ  "ವಂದೇ ಮಾತರಂ" ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, 'ವಂದೇ ಮಾತರಂ' ನಮಗೆ ಹೊಸ ಸ್ಫೂರ್ತಿ ನೀಡುತ್ತದೆ ಎಂದರು.

ಇಂದು ನಾವು ವಂದೇ ಮಾತರಂ ಗೀತೆಯ 150 ವರ್ಷಗಳನ್ನು ಆಚರಿಸುತ್ತಿದ್ದು, ಇದು ದೇಶದ ಜನರಿಗೆ ಹೊಸ ಚೈತನ್ಯ ತುಂಬುತ್ತದೆ, ನವೆಂಬರ್ 7 ಐತಿಹಾಸಿಕ ದಿನವಾಗಿದ್ದು. 150 ವರ್ಷಗಳು ತುಂಬಿದ ಈ ಸಂಭ್ರಮ ಕೋಟ್ಯಂತರ ಭಾರತೀಯರಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಎನ್ನುತ್ತಾ, ದೇಶದ ನಾಗರಿಕರಿಗೆ ಶುಭಾಶಯ ತಿಳಿಸಿದರು. ಈ ಕಾರ್ಯಕ್ರಮವು ನವೆಂಬರ್ 7, 2025 ರಿಂದ ನವೆಂಬರ್ 7, 2026 ರವರೆಗೆ ವರ್ಷಪೂರ್ತಿ ದೇಶಾದ್ಯಂತ ನಡೆಯುವ ಸ್ಮರಣಾರ್ಥ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ಸೂಚಿಸುತ್ತದೆ - ಇದು ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಪ್ರಚೋದಿಸುತ್ತಿರುವ ಕಾಲಾತೀತ ಸಂಯೋಜನೆಯ 150 ವರ್ಷಗಳನ್ನು ಆಚರಿಸುತ್ತದೆ.

ವಂದೇ ಮಾತರಂ ಗೀತೆಯ 150 ವರ್ಷಗಳನ್ನು ಸ್ಮರಿಸುವ ಪೋರ್ಟಲ್ ಉದ್ಘಾಟಿಸಿದ ಪ್ರಧಾನಿ ಮೋದಿ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ನಾವು ವಂದೇ ಮಾತರಂನ 150 ಅದ್ಭುತ ವರ್ಷಗಳನ್ನು ಆಚರಿಸುತ್ತಿದ್ದೇವೆ, ಸ್ಫೂರ್ತಿ ನೀಡಿದ ಮತ್ತು ನಮ್ಮ ರಾಷ್ಟ್ರದಾದ್ಯಂತ ದೇಶಭಕ್ತಿಯ ಮನೋಭಾವವನ್ನು ಹೆಚ್ಚಿಸಿದ ರೋಮಾಂಚಕಾರಿ ಕರೆಯಾಗಿದೆ.

ಆಚರಣೆಯ ವೇಳೆ ಬೆಳಿಗ್ಗೆ 9:50 ರ ಸುಮಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ 'ವಂದೇ ಮಾತರಂ' ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಲಿದೆ, ಮುಖ್ಯ ಕಾರ್ಯಕ್ರಮದ ಜೊತೆಗೆ ಸಮಾಜದ ಎಲ್ಲಾ ವರ್ಗಗಳ ನಾಗರಿಕರ ಭಾಗವಹಿಸುವಿಕೆಯೂ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ.

ವಂದೇ ಮಾತರಂ ಹಿನ್ನಲೆ...

ಈ ವರ್ಷ "ವಂದೇ ಮಾತರಂ" ರಚನೆಯಾಗಿ 150 ವರ್ಷಗಳು ಸಂದಿವೆ. 1875 ರ ನವೆಂಬರ್ 7 ರಂದು ಬಂದ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬಂಕಿಮಚಂದ್ರ ಚಟರ್ಜಿ ಅವರು "ವಂದೇ ಮಾತರಂ" ಅನ್ನು ಬರೆದಿದ್ದಾರೆ. "ವಂದೇ ಮಾತರಂ" ಮೊದಲು ಸಾಹಿತ್ಯ ಪತ್ರಿಕೆ "ಬಂಗದರ್ಶನ್" ನಲ್ಲಿ ಚಟರ್ಜಿಯವರ "ಆನಂದಮಠ" ಕಾದಂಬರಿಯ ಭಾಗವಾಗಿ ಕಾಣಿಸಿಕೊಂಡಿತು. ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಾಕಾರರೂಪವಾಗಿ ಮಾತೃಭೂಮಿಯನ್ನು ಆಹ್ವಾನಿಸುವ ಈ ಹಾಡು, ಭಾರತದ ಏಕತೆ ಮತ್ತು ಸ್ವಾಭಿಮಾನದ ಜಾಗೃತಿ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ನೀಡಿತು. ಇದು ಶೀಘ್ರದಲ್ಲೇ ರಾಷ್ಟ್ರದ ಭಕ್ತಿಯ ಶಾಶ್ವತ ಸಂಕೇತವಾಯಿತು ಎಂದು ಹೇಳಿಕೆ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net