

ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಸರ್ಕಾರದ ವತಿಯಿಂದ ನಡೆಸಲಾಗುವ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಸ್ಟರ್ಮೈಂಡ್ ಮತ್ತು ಸಾಲ್ವರ್ ಆಗಿ ಕೆಲಸ ಮಾಡಿದ ಇಬ್ಬರು MBBS ವಿದ್ಯಾರ್ಥಿಗಳನ್ನು ಜಮ್ಶೆಡ್ಪುರದಲ್ಲಿ ಬಂಧಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸಾಲ್ವರ್ಗಳನ್ನು ರಾಜಸ್ತಾನದ ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಮಾಸ್ಟರ್ಮೈಂಡ್ನನ್ನು ಬಿಟೆಕ್ ಪದವಿಧರ ಪಂಕಜ್ ಕುಮಾರ್ ಎಂದು ತಿಳಿದು ಬಂದಿದೆ ಇದರೊಂದಿಗೆ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಮೇ 05ರಂದು ನಡೆದ ನೀಟ್ ಪರೀಕ್ಷೆ ವೇಳೆ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕುಮಾರ ಮಂಗಲಂ ಬಿಷ್ಣೋಯ್ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿ ದೀಪೇಂದರ್ ಶರ್ಮಾ ಪರೀಕ್ಷೆ ನಡೆಯುತ್ತಿದ್ದ ಹಜಾರಿಬಾಗ್‌ನಲ್ಲಿ ಉಪಸ್ಥಿತರಿದ್ದರು. ಇದನ್ನು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳು ದೃಢಪಡಿಸಿದ್ದು, ಮಾಸ್ಟರ್ಮೈಂಡ್ ಪಂಕಜ್ ಕುಮಾರ್ ಕದ್ದ ಪೇಪರ್ಗಳನ್ನು ಕುಮಾರ ಮಂಗಲಂ ಹಾಗೂ ದೀಪೇಂದರ್ ಸಾಲ್ವ್ ಮಾಡಿದ್ದರು ಎಂದು ವರದಿಯಾಗಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸುಪ್ರೀಂಕೋರ್ಟ್ ಆದೇಶದ ನಂತರ NEET-UG ಗಾಗಿ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ಪ್ರಕಟಿಸಿದ ಗಂಟೆಗಳ ನಂತರ ಇವರ ಬಂಧನದ ಸುದ್ದಿಯಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ.