ನವದೆಹಲಿ: ಜುಲೈ 27ರಿಂದ ಆರಂಭವಾಗಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಹಾಗೂ ಏಕದಿನ ಸರಣಿಗೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾ ಈ ಸರಣಿಯನ್ನು ನೂತನ ಕೋಚ್ ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ಆಡಲಿದೆ. ನೂತನ ಕೋಚ್ ಗೌತಮ್ ಗಂಭೀರ್ ಅವರ ಮುಂದೆ ಬೆಟ್ಟದಷ್ಟು ಸವಾಲಿದ್ದು, ಅವರು ತಂಡವನ್ನು 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ಸಜ್ಜುಗೊಳಿಸಬೇಕಿದೆ.
ತಂಡದಲ್ಲಿ ಕೆಲವೊಂದು ಬದಲಾವಣೆಗಳತ್ತ ಗಮನ ಹರಿಸಿರುವ ಗಂಭೀರ್ ಪ್ರಸ್ತುತ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್ ಸೇರಿದಂತೆ ಮಹತ್ವದ ಬದಲಾವಣೆಯತ್ತ ಗಮನ ಹರಿಸಿದ್ದಾರೆ. ಟಿ20 ವಿಶ್ವಕಪ್ ಫೈನಲ್ ಪಂದ್ಯದೊಂದಿಗೆ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿದ್ದು, ಇವರ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಅವಧಿಯು ಸಹ ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ ಬದಲಿ ಕೋಚ್ಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರ್ ಮುಂದಾಗಿದ್ದು, ಈ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವು ಸೋಮವಾರವೇ ಕೊಲಂಬೋಗೆ ಹಾರಲಿದ್ದು, ಇದಕ್ಕೂ ಮುನ್ನ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್ರನ್ನು ಔಪಚಾರಿಕವಾಗಿ ಟೀಮ್ ಇಂಡಿಯಾ ಕೋಚ್ ಎಂದು ಘೋಷಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಇರಲಿದ್ದಾರೆ. ಇದರ ಜೊತೆಗೆ ಸಹಾಯಕ ಸಿಬ್ಬಂದಿಯ ಹೆಸರನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ವ್ಯಕ್ತಿ; ಅಮಾನವೀಯ ವಿಡಿಯೋ ವೈರಲ್
ಕ್ರಿಕ್ಬಜ್ ವರದಿ ಮಾಡಿರುವ ಪ್ರಕಾರ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ದಿಲೀಪ್ ಅವರ ಅವಧಿ ಮತ್ತೆ ವಿಸ್ತರಣೆಯಾಗುವುದು ಖಚಿತ ಎಂದು ಪರಿಗಣಿಸಲಾಗಿದೆ. ದಿಲೀಪ್ ಅವರು ಫೀಲ್ಡಿಂಗ್ ಕೋಚ್ ಆಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣ ಸೃಷ್ಟಿಸಿದ್ದು, ಆಟಗಾರರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಹೀಗಾಗಿಯ ಫೀಲ್ಡಿಂಗ್ ಕೋಚ್ ಆಗಿ ದಿಲೀಪ್ ಅವರು ಮುಂದುವರೆಯುವುದು ಬಹುತೇಕ ಖಚಿತವಾಗಿದೆ.
ಇದಲ್ಲದೆ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಚೇಟ್ ಇಬ್ಬರನ್ನೂ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಹಾಯಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಬೌಲಿಂಗ್ ಕೋಚ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ನ್ ಮಾರ್ಕೆಲ್ ಹೆಸರು ಕೇಳಿ ಬರುತ್ತಿದ್ದು, ಸೋಮವಾರದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಇನ್ನೊಂದು ವಿಶೇಷ ಏನೆಂದರೆ ಇವರೆಲ್ಲರೂ ಐಪಿಎಲ್ನಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.