ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

Published on

ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಸಮೀಪವಿರುವ ಕಪಿಲಾ ನದಿಯ ಹತ್ವಾಳು ಕಟ್ಟೆಯಲ್ಲಿ ಬುಧವಾರ ಸಂಜೆ ಸ್ನೇಹಿತರ ಜತೆ ಈಜಲು ನೀರಿಗಿಳಿದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾನೆ.


ನಗರದ ದೇವೀರಮ್ಮನಹಳ್ಳಿ ಬಡಾವಣೆಯ ಕೃಷ್ಣಮೂರ್ತಿ ಲೇಔಟ್ ನಿವಾಸಿ ಶ್ರೀನಿವಾಸಾಚಾರ್ ಅವರ ಪುತ್ರ ಅಭಿಷೇಕ್(23) ಮೃತ ವಿದ್ಯಾರ್ಥಿ. ಈತ ತಾಂಡವಪುರದ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ರಜೆ ಇದ್ದ ಕಾರಣ ಅಭಿಷೇಕ್ ಬುಧವಾರ ಸಂಜೆ ತನ್ನ ಸ್ನೇಹಿತರಾದ ಸಮರ್ಥ್ ಹಾಗೂ ಪ್ರೀತಂ ಅವರ ಜತೆ ಹತ್ವಾಳು ಕಟ್ಟೆಗೆ ಈಜಲು ತೆರಳಿದ್ದ. ಸ್ನೇಹಿತರ ಜತೆಗೆ ನೀರಿಗೆ ಧುಮುಕಿ ಈಜುತ್ತಾ ಮುಂದೆ ಸಾಗಿದ ಅಭಿಷೇಕ್ ವಾಪಸ್ ಬರಲು ಸಾಧ್ಯವಾಗದಿದ್ದಾಗ ಜತೆಯಲ್ಲಿದ್ದ ಸ್ನೇಹಿತರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಆಗ ಸ್ಥಳದಲ್ಲಿದ್ದವರು ಆಗಮಿಸಿ ನೀರಿಗಿಳಿದು ಶೋಧ ನಡೆಸಿ ನೀರಿನಲ್ಲಿ ಮುಳುಗಿದ್ದ ಅಭಿಷೇಕ್‌ನನ್ನು ಮೇಲೆತ್ತಿದರಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ.


ಈ ಬಗ್ಗೆ ಮೃತನ ತಂದೆ ಶ್ರೀನಿವಾಸಾಚಾರ್ ನೀಡಿದ ದೂರು ಆಧರಿಸಿ ಹುಲ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮೃತದೇಹವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಗುರುವಾರ ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net