

ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಸ್ಥಿತಿ ನಿಯಂತ್ರಣದಲ್ಲಿದ್ದು, ಗಾಬರಿ ಆಗುವ ಅವಶ್ಯಕತೆ ಇಲ್ಲ. ಆದರೆ, ರಾಜ್ಯದಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂನಂತಹ ಕಠಿಣ ಕ್ರಮ ಮತ್ತೆ ಜಾರಿ ಆಗಬಾರದೆಂದರೆ ಜನಜಂಗುಳಿ ಸೇರುವುದನ್ನು ತಕ್ಷಣದಿಂದಲೇ ನಿಯಂತ್ರಿಸಲೇಬೇಕು ಎಂದು ತಜ್ಞರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಲಾಕ್ಡೌನ್, ನೈಟ್ ಕರ್ಫ್ಯೂ ಹೇರುವ ಯಾವುದೇ ಪ್ರಸ್ತಾಪ ಇಲ್ಲ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಕುರಿತು ಮುಂದಿನ ಒಂದು ವಾರದ ಬಳಿಕ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆಗೆ ತಜ್ಞರ ಸಮಿತಿಯ ಮುಖ್ಯಸ್ಥ ಡಾ. ಸುದರ್ಶನ್ ಅವರನ್ನು ಆಹ್ವಾನಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ತಮ್ಮ ಸಹೋದ್ಯೋಗಿಗಳಿಗೆ ವಸ್ತುಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಿದರು. ಈಗ ಕರೊನಾ ತೀವ್ರತೆ ಕಡಿಮೆ ಇರಬಹುದು. ಮುಂದಿನ ಎರಡು ತಿಂಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಎಚ್ಚರ ತಪ್ಪಿದರೆ ಆಪತ್ತು ಎದುರಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಈಗ ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿದೆ. ಆರ್ಥಿಕ ಸ್ಥಿತಿಯೂ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮೈ ಮರೆತರೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಗಳಿವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಉಡುಪಿ ಪರ್ಯಾಯಕ್ಕೆ ಅನುಮತಿ ಇಲ್ಲ?: 2022ರ ಜನವರಿಯಲ್ಲಿ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಸೇರಿ ಮುಂದೆ ನಡೆಯುವ ಎಲ್ಲಾ ರಥೋತ್ಸವ, ಜಾತ್ರೆಗಳಿಗೆ ಸರ್ಕಾರ ಅನುಮತಿ ಕೊಡಬಾರದು ಎಂದು ತಜ್ಞರು ಸಲಹೆ ಮಾಡಿದ್ದಾರೆ. ಮದುವೆ ಸಮಾರಂಭಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ರಾಜಕೀಯ ಸಭೆ, ಹಬ್ಬ, ಜಾತ್ರೆ ಆಚರಣೆ, ಧಾರ್ವಿುಕ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮದ ಬಗ್ಗೆ ಗಮನ ಕೊಡುತ್ತಿಲ್ಲ. ಮದುವೆ ಸಮಾರಂಭಗಳಲ್ಲಿ ಈಗ ಇರುವ 500ರ ಸಂಖ್ಯಾಮಿತಿಯನ್ನು ಇನ್ನಷ್ಟು ಕಡಿಮೆ ಮಾಡಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲೇಬೇಕು. ಪ್ರತಿಭಟನೆಗಳಿಗೂ ಅವಕಾಶ ಬೇಡವೇ ಬೇಡ. ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಮುಲಾಜಿಲ್ಲದೇ ಬಿಗಿಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆಂದು ಹಿರಿಯ ಸಚಿವರು ಸಂಪುಟ ಸಭೆ ಬಳಿಕ ಸ್ಪಷ್ಟಪಡಿಸಿದರು.
ಲಸಿಕೆ ಅಭಿಯಾನ ಚುರುಕು: ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆಸುವಂತೆ ಸಂಪುಟ ಸದಸ್ಯರು ಸಿಎಂಗೆ ಸಲಹೆ ನೀಡಿದ್ದು, ಸಿಎಂ ಕೂಡ ಇದಕ್ಕೊಪ್ಪಿದ್ದಾರೆ. ಪ್ರತಿ ದಿನ ಲಸಿಕೆ ವಿತರಣೆ ಹೊರತಾಗಿ ಒಂದು ನಿರ್ದಿಷ್ಟ ದಿನ ಆದ್ಯತೆ ಮೇಲೆ ಹೆಚ್ಚು ಜನರನ್ನು ತಲುಪಲು ಗುರಿ ಹಾಕಿಕೊಂಡು ಕಾರ್ಯೋನ್ಮುಖರಾಗಬೇಕೆಂಬುದು ಸಚಿವರ ಸಲಹೆ ನೀಡಿದ್ದರು. ಲಸಿಕೆ ಅಭಿಯಾನ ಹೆಚ್ಚು ಪರಿಣಾಮಕಾರಿಯಾಗಲಿದೆ, ಜನರಲ್ಲೂ ಜಾಗೃತಿಯಾಗಲಿದೆ, ವಿತರಣೆ ಸುಲಭವಾಗಲಿದೆ, ಮನೆ ಮನೆಗೂ ತೆರಳಿ ಲಸಿಕೆ ವಿತರಣೆಗೆ ಕ್ರಮಗಳಾದರೆ ಇನ್ನಷ್ಟು ವೇಗವಾಗಿ ಗುರಿಮುಟ್ಟಬಹುದೆಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.
ನಿರ್ಧಾರ ಸಿಎಂ ವಿವೇಚನೆಗೆ: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರ ಸಮಿತಿ ಶುಕ್ರವಾರ ಇಲ್ಲವೇ ಶನಿವಾರ ವರದಿ ಕೊಡಲಿದೆ. ಈ ವರದಿ ಆಧರಿಸಿ ಕ್ರಮಕೈಗೊಳ್ಳಲು ಸಂಪುಟ ಸಭೆ ಮುಖ್ಯಮಂತ್ರಿಗೆ ಪೂರ್ಣ ಅಧಿಕಾರ ನೀಡಿದೆ. ವರದಿ ಆಧರಿಸಿ ಮುಂಬರುವ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮತ್ತು ರಾತ್ರಿ ಕರ್ಫ್ಯೂ, ಲಾಕ್ಡೌನ್ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಿಎಂ ವಿವೇಚನೆಗೆ ಬಿಡಲಾಗಿದೆ.
ಹಾಸ್ಟೆಲ್ಗಳಿಗೆ ಕಠಿಣ ನಿಯಮ: ಹಾಸ್ಟೆಲ್ಗಳಲ್ಲಿ ಕರೊನಾ ತೀವ್ರವಾಗಿ ಹರಡುತ್ತಿದೆ. ಅಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕಾರಣಕ್ಕೆ ಹಾಸ್ಟೆಲ್ಗಳಲ್ಲಿ ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡುವುದು, ಎಲ್ಲರನ್ನೂ ಏಕಕಾಲದಲ್ಲಿ ಊಟಕ್ಕೆ ಬಿಡದೇ ಇರುವುದು, ಹಾಸ್ಟೆಲ್ಗೆ ಸಂದರ್ಶಕರನ್ನು ನಿಯಂತ್ರಿಸುವುದು, ಐಸೋಲೇಷನ್ ರೂಂ ಮಾಡಿ ಲಕ್ಷಣ ಕಂಡುಬಂದವರನ್ನು ಅಲ್ಲಿ ಇರಿಸುವುದು, ಅಡುಗೆ ಹಾಗೂ ಇತರೆ ಸಿಬ್ಬಂದಿಗೆ ಲಸಿಕೆ ಡಬಲ್ ಡೋಸ್ ಆಗುವಂತೆ ತಕ್ಷಣವೇ ಕ್ರಮ ಕೈಗೊಳ್ಳಲು ತಜ್ಞರು ಸೂಚನೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು. ಈ ಪ್ರಕಾರವೇ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ಲಾಕ್ಡೌನ್ ಅಥವಾ ನೈಟ್ ಕರ್ಫ್ಯೂ ಹಾಕುವ ಯಾವುದೇ ಪ್ರಸ್ತಾಪ ಇಲ್ಲ. ಕ್ರಿಸ್ಮಸ್, ಹೊಸ ವರ್ಷಾಚರಣೆ ಕುರಿತು ಇನ್ನೊಂದು ವಾರದ ಬಳಿಕ ತೀರ್ಮಾನ ಮಾಡಲಾಗುತ್ತದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಶಾಲೆಗಳು ಈಗ ಆರಂಭವಾಗಿದ್ದು, ಕೋವಿಡ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರದೆ ಇರುವುದರಿಂದ ಅವುಗಳನ್ನು ಮುಚ್ಚುವುದು ಬೇಡವೆಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ವಿವರಣೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ಕ್ಲಸ್ಟರ್ ನಿರ್ವಹಣೆ ಬಗ್ಗೆ ತಜ್ಞ ವೈದ್ಯರು ತಿಳಿಸಿದ್ದು, ಆ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ. ಕ್ಲಸ್ಟರ್ ರೂಪದಲ್ಲಿ ಸೋಂಕು ಕಾಣಿಸುತ್ತಿದೆ. ಕ್ಲಸ್ಟರ್ ಮಟ್ಟದಲ್ಲಿ ನಿರ್ವಹಣೆಯಾಗಬೇಕು. ಹೆಚ್ಚು ಪ್ರಕರಣ ಕಂಡುಬಂದ ಕಡೆ ಸೀಲ್ಡೌನ್ ಮಾಡಿ ಆ ಪ್ರದೇಶದ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕು, ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕವನ್ನು ವೇಗವಾಗಿ ಪತ್ತೆ ಹಚ್ಚಲು ಸೂಚಿಸಿದ್ದು, ಈ ಬಗ್ಗೆ ನಿರ್ದೇಶನ ನೀಡಲಾಗುತ್ತದೆ ಎಂದು ಹೇಳಿದರು.