

ಭಾರತದಲ್ಲಿ ಕರೊನಾ ಎಡರನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತಿದೆ. ಆದರೆ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಕರೊನಾದ ಡೆಲ್ಟಾ ಪ್ಲಸ್ ರೂಪಾಂತರಿ ಹಾವಳಿ ಶುರುವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ, ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಎಂಟು ರಾಜ್ಯಗಳಿಗೆ ಇತ್ತೀಚೆಗಷ್ಟೇ ಸೂಚನೆ ನೀಡಿದೆ. ಜನಸಂದಣಿ ನಿಯಂತ್ರಣ, ತಪಾಸಣೆ ಹೆಚ್ಚಳ, ಸೋಂಕಿತರ ಪತ್ತೆ ಮತ್ತು ಲಸಿಕೆಗೆ ಆದ್ಯತೆ ನೀಡುವಂತೆ ಹೇಳಿದೆ.
ಏಷ್ಯಾ-ಪೆಸಿಫಿಕ್ ವಲಯದಲ್ಲಿ ಡೆಲ್ಟಾದ ಪ್ರಕರಣ ಹೆಚ್ಚುತ್ತಿರುವ ಪರಿಣಾಮ, ಸೋಂಕು ಪ್ರಸರಣ ನಿಯಂತ್ರಿಸಲು ಹಲವು ದೇಶಗಳಲ್ಲಿ ಮತ್ತೆ ಲಾಕ್ಡೌನ್ ಮುಂತಾದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿ ಸಲಾಗುತ್ತಿದೆ, ಕೆಲವೆಡೆ ಈಗಾಗಲೇ ಇರುವ ಲಾಕ್ಡೌನ್ನ್ನು ವಿಸ್ತರಿಸಲಾಗಿದೆ. 85ಕ್ಕೂ ಅಧಿಕ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಹಬ್ಬಿದ್ದು, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿ ಯಾದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿರುವ ರಾಷ್ಟ್ರಗಳಲ್ಲಿ ಮಾತ್ರ ಹೊಸ ಪ್ರಕರಣಗಳು ನಿಯಂತ್ರಣದಲ್ಲಿವೆ.
ಭಾರತದಲ್ಲಿ ಮೊದಲನೇ ಅಲೆಯ ಅಬ್ಬರ ಇಳಿದ ಮೇಲೆ, ಸರ್ಕಾರ ಮತ್ತು ಜನರು ಎರಡನೇ ಅಲೆ ಬರಲಾರದೆಂದು ಅಂದಾಜಿಸಿಯೇ ಎಡವಿದರು. ಅಮೆರಿಕ, ಬ್ರಿಟನ್ ಸೇರಿ ಹಲವು ರಾಷ್ಟ್ರಗಳಲ್ಲಿ ಭಾರಿ ಹಾನಿ ಸೃಷ್ಟಿಸಿದ ಎರಡನೇ ಅಲೆ ವಿಳಂಬವಾಗಿ ಭಾರತಕ್ಕೆ ಬಂದಿತಾದರೂ, ಸೂಕ್ತ ಸಿದ್ಧತೆಗಳಿಲ್ಲದ ಪರಿಣಾಮ ಸಾವು-ನೋವಿನ ಪ್ರಮಾಣ ಹೆಚ್ಚಾಯಿತು. ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸಬೇಕಾಯಿತು. ದೇಶದ ಬಹುತೇಕ ರಾಜ್ಯಗಳು ಒಂದು ತಿಂಗಳಿಗೂ ಹೆಚ್ಚುಅವಧಿಯ ಲಾಕ್ಡೌನ್ ವಿಧಿಸಿದ ಪರಿಣಾಮ ವ್ಯಾಪಾರ-ವಹಿವಾಟು ಸ್ಥಗಿತಗೊಂಡವು. ಕೋವಿಡ್ ಎಲ್ಲ ಕಡೆ ಒಂದೇ ಸಲ ತೀವ್ರಗೊಳ್ಳುವುದಿಲ್ಲ. ದೇಶದಲ್ಲೂ ಒಂದು ರಾಜ್ಯದಲ್ಲಿ ಏರಿಕೆಯಾದರೆ, ಮತ್ತೊಂದು ರಾಜ್ಯದಲ್ಲಿ ಇಳಿಕೆಯಾಗಿರುತ್ತದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ತೀವ್ರವಾಗಿ ಹೆಚ್ಚಿದ ಬಳಿಕ, ಕರ್ನಾಟಕದಲ್ಲೂ ಸೋಂಕು ಪ್ರಸರಣ ವೇಗ ಪಡೆದಿತ್ತು. ಹಾಗಾಗಿ, ಸೂಕ್ತ ಎಚ್ಚರಿಕೆ ಅಗತ್ಯ. ಈಗಿನ ಸ್ಥಿತಿಯಲ್ಲಿ ಕರೊನಾ ಪ್ರಕರಣಗಳು ಏರಿಕೆ-ಇಳಿಕೆ ಕಾಣುತ್ತಿವೆ. ಲಸಿಕೆ ಅಭಿಯಾನ ಇದೇ ವೇಗದಲ್ಲಿ ಮುಂದುವರಿದರೆ ಮೂರನೇ ಅಲೆಯನ್ನು ತಡೆಯುವುದು ಕಷ್ಟಸಾಧ್ಯ. ಡೆಲ್ಟಾ ಶೀಘ್ರವಾಗಿ ಹಬ್ಬುವ ರೂಪಾಂತರಿ ಸೋಂಕಾಗಿದೆ ಎಂಬುದು ವಿಜ್ಞಾನಿಗಳ ಅಭಿಮತ.
ಕಳೆದ ಕೆಲ ದಿನಗಳಿಂದ ಅನ್ಲಾಕ್ ಪ್ರಕ್ರಿಯೆಗಳು ಆರಂಭವಾಗಿರುವುದು ಹೌದಾದರೂ, ಮೂರನೆಯ ಅಲೆಯ ಸಾಧ್ಯತೆಯನ್ನು ನಿರ್ಲಕ್ಷಿಸಬಾರದು. ಅನ್ಲಾಕ್ನಿಂದ ಓಡಾಟ ಹೆಚ್ಚಿದ್ದು, ಮತ್ತೆ ಅಪಾಯವನ್ನು ಆಹ್ವಾನಿಸಿಕೊಳ್ಳ ಬಾರದು. ಜನರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಲಸಿಕೆ ಹಾಕಿಸಿ ಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗಂತೂ ಎರಡನೇ ಅಲೆ ಅನೇಕ ಪಾಠಗಳನ್ನು ಕಲಿಸಿದೆ. ಹಾಗಾಗಿ, ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸನ್ನದ್ಧವಾಗಿ ಇರಿಸುವ, ಜನರಲ್ಲಿ ಅರಿವು ಮೂಡಿಸುವ ಜತೆಗೆ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡುವ ಕೆಲಸ ಆಗಬೇಕಿದೆ. 3ನೇ ಅಲೆ ತಡೆಯುವಲ್ಲಿ ಯಶಸ್ವಿಯಾದರೆ, ಅದು ದೊಡ್ಡ ನಿರಾಳತೆಯೇ. ಹಾಗಾಗಬೇಕಾದರೆ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ಜನರು ಜವಾಬ್ದಾರಿಯಿಂದ ವರ್ತಿಸಬೇಕು.